ಬೆಂಗಳೂರು: ಕರ್ನಾಟಕದಲ್ಲಿ ಬೆಲೆ ಏರಿಕೆಯಿಂದ ಜನ ಪರಿತಪ್ಪಿಸಬೇಕಾಗಲಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಹಾಲಿನ ದರ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಹಾಳು ಮಾಡಲು ಹೊರಟಿದೆ. ಈಗಾಗಲೇ ಭಾಗ್ಯ ಕೊಡೋದಾಗಿ ಇಲ್ಲಸಲ್ಲದ ಆಮಿಷ ಒಡ್ಡಿದೆ. ಯಾರೂ ಫ್ರೀ ಬೇಕು ಅಂತ ಕೇಳಿರಲಿಲ್ಲ. ಹೀಗಾಗಿ ಎಲ್ಲ ದರ ಹೆಚ್ಚಳ ಮಾಡಬೇಕಾಗಿದೆ. ಹಾಲಿನ ದರ 5-6 ರೂ ಹೆಚ್ಚಳ ಮಾಡುವ ನಿರ್ಧಾರ ಇದೆ. ಒಂದು ಕೈಯ್ಯಲ್ಲಿ ಕೊಡೋದು, ಎರಡು ಕೈಯಲ್ಲಿ ಬಾಚಿಕೊಳ್ಳೋದು ಇವರ ಕೆಲಸ ಎಂದು ಕಿಡಿ ಕಾರಿದರು.
ಎಲ್ಲ ದರ ಹೆಚ್ಚಾದ್ರೆ ಜನ ಹೇಗೆ ಬದುಕಬೇಕು. ಜನ ಬಸ್ನಲ್ಲಿ ಹೋಗೋ ದರದಲ್ಲಿ ಟೊಮೆಟೊ, ತರಕಾರಿ, ಹಾಲು ಕೊಳ್ಳಬಹುದು. ಎಲ್ಲ ಹೆಣ್ಣುಮಕ್ಕಳು ಬಸ್ಸಲ್ಲಿ ಓಡಾಡ್ತಾರೆ ಅಂತ ಅಂದುಕೊಂಡಿರಬಹುದು ಆದರೇ ಹಳ್ಳಿ ಕಡೆ ಓಡಾಡಲ್ಲ, ನಗರದಲ್ಲಿ ಮಾತ್ರ ಓಡಾಡ್ತಾರೆ ಅಷ್ಟೇ. ಕಾಂಗ್ರೆಸ್ ಶಾಸಕರೊಬ್ಬರು ಸದನದಲ್ಲಿ ಬಿಟ್ಟಿ ಸಲಹೆಯನ್ನ ಕೊಟ್ರು ಎಂದು ವಾಗ್ದಾಳಿ ನಡೆಸಿದರು. ಸಂಘಪರಿವಾರಕ್ಕೆ ನೀಡಿದ ಜಮೀನು ತಡೆಹಿಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಸರ್ಕಾರ ಇದ್ದಾಗ ರಾಷ್ಟ್ರೋತ್ತಾನಕ್ಕೆ ಜಮೀನು ಕೊಟ್ಟಿದ್ದೆವು. ಕಾಂಗ್ರೆಸ್ ಇದ್ದಾಗಲೂ ಚನ್ನೇನಹಳ್ಳಿಯಲ್ಲಿ ಕೊಟ್ಟಿತ್ತು. ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಓದಲು ಅವಕಾಶ ಇತ್ತು. ಈಗ ದ್ವೇಷದ ರಾಜಕಾರಣ ಮಾಡ್ತಿದೆ ಎಂದು ಆರೋಪಿಸಿದರು.
ಅಕ್ರಮದಲ್ಲಿ ಭಾಗಿಯಾದವರನ್ನು ಗಡಿಪಾರು ಮಾಡಬೇಕು:ಅಕ್ರಮದಲ್ಲಿ ಭಾಗಿಯಾದವರನ್ನ ಗಡಿಪಾರು ಮಾಡಬೇಕು ಎಂದು ದೇವದುರ್ಗ ಶಾಸಕಿ ಕರೇಮ್ಮ ಜಿ. ನಾಯಕ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸದನದಲ್ಲಿ ಅಪರಿಚಿತ ವ್ಯಕ್ತಿ ತಮ್ಮ ಆಸನದಲ್ಲಿ ಕುಳಿತ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಯಾಕೆ ಬಂದು ನನ್ನ ಚೇರಲ್ಲಿ ಕೂತ್ರು ಗೊತ್ತಿಲ್ಲ. ಅದು ನನಗೆ ಆತಂಕ ತರಿಸಿತ್ತು. ಖಾಲಿ ಇದ್ದದ್ದಕ್ಕೆ ಬಂದು ಕುಳಿತ ಹಿನ್ನೆಲೆ ನಿರಾಳ ಆಯ್ತು. ಗೃಹಸಚಿವರು ಧೈರ್ಯ ತುಂಬಿದ್ದು, ನಾನು ನಿರಾಳ ಆಗಿದ್ದೇನೆ ಎಂದರು. ಈ ಸಂಬಂಧ ಸದನದಲ್ಲಿ ಚರ್ಚೆ ಮಾಡಿದ್ದೇನೆ. ದೇವದುರ್ಗ ಕ್ಷೇತ್ರದ ಮಟ್ಕ, ಇಸ್ಪೀಟ್, ಮರಳು ಮಾಫಿಯಾದಂತ ಅಕ್ರಮ ಚಟುವಟಿಕೆ ಬಗ್ಗೆ ಮಾತನಾಡಿದೆ. ದೇವದುರ್ಗ ಜನರಿಗೆ ನ್ಯಾಯ ಕೊಡಿಸಲು ಮಾತನಾಡಿದೆ. ಗೃಹಸಚಿವ ಪರಮೇಶ್ವರ್ ಅವರು ಕರೆದು ಚರ್ಚೆ ಮಾಡಿದ್ರು. ಯಾವುದೇ ಪಕ್ಷ ಇರಬಹುದು. ಅಭಿವೃದ್ಧಿ ದೃಷ್ಟಿಯಿಂದ ಏನೇ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವ ಭರವಸೆ ನೀಡಿದ್ರು ಎಂದರು.
ಬೊಮ್ಮಾಯಿ ಅವಧಿಯ ಅನೇಕ ಯೋಜನೆಗಳಿಗೆ ಸರ್ಕಾರ ಮಣ್ಣು ಹಾಕಿದೆ :ಬೊಮ್ಮಾಯಿ ಅವರ ಅವಧಿಯ ಅನೇಕ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಮಣ್ಣು ಹಾಕಿದೆ. ಮುಂದಿನ ದಿನಗಳಲ್ಲಿ ಜನ ಇವರಿಗೆ ತಕ್ಕ ಪಾಠ ಕಲಿಸ್ತಾರೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಸರ್ಕಾರ ಬಡವರು, ರೈತರ ಬಗ್ಗೆ ಕಾಳಜಿ ತೋರಿಸ್ತಿಲ್ಲ. ಕುಡಿಯುವ ನೀರಿಗೆ ಹಾಹಾಕಾರ ಇದೆ, ಬರ ಇದೆ. ಇದರ ಬಗ್ಗೆ ಸದನದಲ್ಲೂ ಚರ್ಚೆ ಆಗ್ಲಿಲ್ಲ. ಗ್ಯಾರಂಟಿ ಕಾರ್ಡ್ ಗಳಿಂದ ಜನಕ್ಕೆ ದೊಡ್ಡ ಸಹಾಯ ಏನೂ ಆಗ್ತಿಲ್ಲ ಎಂದು ತಿಳಿಸಿದರು. ಜನಸೇವಾ ಟ್ರಸ್ಟ್ ಗೆ ಮಂಜೂರಾದ ಭೂಮಿ ಹಿಂಪಡೆಯುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದು ನಿರೀಕ್ಷಿತವೇ ಆಗಿತ್ತು. ಈ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗ್ತಿದೆ ಅಂತ ಅವರೇ ತೋರಿಸ್ತಿದ್ದಾರೆ. ಸಚಿವರು ಆರಂಭದಲ್ಲೇ ಆರ್ಎಸ್ಎಸ್ಗೆ ಮಂಜೂರಾದ ಭೂಮಿ ವಾಪಸ್ ಬಗ್ಗೆ ಮಾತಾಡ್ತಾರೆ. ಜನಸೇವಾ ವಿದ್ಯಾಕೇಂದ್ರ ಲಕ್ಷಾಂತರ ಬಡಮಕ್ಕಳಿಗೆ ವಿದ್ಯೆ ಕೊಡ್ತಿರುವ ಸಂಸ್ಥೆ. ಅಂಥ ಸಂಸ್ಥೆಯಿಂದ ಭೂಮಿ ವಾಪಸ್ ಸರಿಯಲ್ಲ. ನಾನೂ ಕೂಡಾ ಅದೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಬೊಮ್ಮಾಯಿ ಅವರ ಅವಧಿಯ ಅನೇಕ ಯೋಜನೆಗಳಿಗೆ ಈ ಸರ್ಕಾರ ಮಣ್ಣು ಹಾಕಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಹಾಲಿನ ದರ ಹೆಚ್ಚಳ ಸಂಬಂಧ ಸಿಎಂ ಜೊತೆಗಿನ ಸಭೆ ಬಳಿಕ ತೀರ್ಮಾನ: ಸಚಿವ ಕೆ.ವೆಂಕಟೇಶ್