ಬೆಂಗಳೂರು: ಭಾರತದ ಎಲ್ಲ ಬ್ರಾಹ್ಮಣರು ಒಂದೇ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕದ ಬ್ರಾಹ್ಮಣರು ಎಂದು ವಿಂಗಡಣೆ ಮಾಡುತ್ತ, ನೀವು ಬ್ರಿಟೀಷರ ಹಾಗೆ ಒಡೆದು ಆಳುವ ನೀತಿ ಅನುಸರಿಸುತ್ತಿದ್ದೀರಿ ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ.
ಕುಮಾರಸ್ವಾಮಿ ಹೇಳಿಕೆಯ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು, ರಾಷ್ಟ್ರಕ್ಕೆ, ರಾಜ್ಯಕ್ಕೆ ಎಲ್ಲರಂತೆ ಬ್ರಾಹ್ಮಣ ಸಮಾಜದ ಕೊಡುಗೆ ಸಾಕಷ್ಟಿದೆ. ಸ್ವಭಾವತಃ ಸಾಧುಗಳಾದ ಬ್ರಾಹ್ಮಣರ ಮೇಲೆ ಮಾತನಾಡಿ ಆ ಸಮಾಜಕ್ಕೆ ನೋವುಂಟು ಮಾಡಿದ್ದಕ್ಕಾಗಿ ನೀವು ತಕ್ಷಣ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದನ್ನು ತಿಳಿದು ಅಸಹಾಯಕತೆ ಹಾಗೂ ಹತಾಶೆಯಿಂದ ಮಾತನಾಡುತ್ತಿದ್ದಾರೆ ಅನಿಸುತ್ತದೆ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.
ಸಚಿವ ಗೋವಿಂದ ಕಾರಜೋಳ ಕೂಡ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ. ಒಬ್ಬರಾದ ಮೇಲೊಬ್ಬರಂತೆ ಜೆಡಿಎಸ್ ಶಾಸಕರು ಪಕ್ಷ ತೊರೆಯುತ್ತಿರುವುದರಿಂದ ಹತಾಶರಾಗಿರುವ ಕುಮಾರಸ್ವಾಮಿಯವರು, ಬ್ರಾಹ್ಮಣ ನಿಂದನೆಯನ್ನು ಜಾತ್ಯತೀತ ಮನೋಭಾವ ಎಂದು ಭಾವಿಸಿರುವಂತಿದೆ. ಪ್ರಹ್ಲಾದ್ ಜೋಶಿಯವರು ಬಿಜೆಪಿಯ ಹಿರಿಯ ಗೌರವಾನ್ವಿತ ನಾಯಕರು. ಒಂದು ಜಾತಿಯನ್ನು ಪ್ರತಿನಿಧಿಸುವ ನಾಯಕರು ಅವರಲ್ಲ. ಸಂಕುಚಿತ ಭಾವನೆ ಅಥವಾ ಕುತ್ಸಿತ ಮನಸ್ಥಿತಿಯ ರಾಜಕೀಯ ಮಾಡುವ ವ್ಯಕ್ತಿತ್ವ ಅವರದಲ್ಲ ಎಂದಿದ್ದಾರೆ. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವ ಬಿಜೆಪಿಯ ಮನೋಭಾವದೊಂದಿಗೆ ಹಾಸುಹೊಕ್ಕಾಗಿರುವ ಹಿರಿಯ ನಾಯಕರನ್ನು ಜಾತಿಯ ಹೆಸರು ಹೇಳಿ ನಿಂದನೆ ಮಾಡಿರುವುದು ಕುಮಾರಸ್ವಾಮಿಯವರ ಘನತೆಗೆ ಶೋಭೆಯಲ್ಲ ಎಂದು ಹೇಳಿದ್ದಾರೆ.