ಬೆಂಗಳೂರು: ಸದ್ಯ ನಿರ್ವಹಿಸುತ್ತಿರುವ ಜವಾಬ್ದಾರಿಗಳ ಕಾರಣದಿಂದಾಗಿ ಮಂಡ್ಯ ಜಿಲ್ಲೆಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಂದಾಯ ಸಚಿವ ಆರ್.ಅಶೋಕ್ ಪತ್ರ ಬರೆದಿದ್ದಾರೆ.
ಸಚಿವ ಆರ್.ಅಶೋಕ್ ಪತ್ರದ ಸಾರಾಂಶ: ಗಣರಾಜ್ಯೋತ್ಸವ ದಿನದಂದು ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ಮಾಡಲು ನನ್ನನ್ನು ನೇಮಿಸಿದ್ದು, ಅದೇ ಸಂದರ್ಭದಲ್ಲಿ ಉಸ್ತುವಾರಿ ಸಚಿವರನ್ನಾಗಿಯೂ ನೇಮಿಸಲಾಗಿದೆ. ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನನಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡದಂತೆ ಮನವಿ ಮಾಡಿದ್ದೆ. ಆದಾಗ್ಯೂ ತಾವು ನನ್ನ ಮೇಲೆ ವಿಶ್ವಾಸವಿಟ್ಟು ಗಣರಾಜ್ಯೋತ್ಸವ ದಿನಾಚರಣೆಯಂದು ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ಮಾಡಲು ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವನನ್ನಾಗಿ ನೇಮಿಸಿರುವುದಕ್ಕೆ ನಾನು ಆಭಾರಿ. ಆದರೆ ಈಗ ಉಸ್ತುವಾರಿ ಜವಾಬ್ದಾರಿ ನಿರ್ವಹಣೆಗೆ ಸಮಯದ ಕೊರತೆ ಇದೆ. ಹಾಗಾಗಿ ಉಸ್ತುವಾರಿ ಸ್ಥಾನದಿಂದ ನನ್ನನ್ನು ವಿಮುಕ್ತಿಗೊಳಿಸಿ.
ಇತ್ತೀಚೆಗೆ ಕಲಬುರಗಿ ಜಿಲ್ಲೆಯಲ್ಲಿ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ ಲಂಬಾಣಿ ತಾಂಡಾ, ಹಟ್ಟಿ, ಇತ್ಯಾದಿ ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಸುಮಾರು 53,000ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಸನ್ಮಾನ್ಯ ಪ್ರಧಾನಮಂತ್ರಿಗಳು ವಿತರಿಸಿದ್ದು, ಇದೇ ಮಾದರಿಯಲ್ಲಿ ಮುಂದಿನ 30 ದಿನಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಬಡವರು ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಿ 94ಸಿ ಮತ್ತು 94ಸಿಸಿ ಅಡಿಯಲ್ಲಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಸುಮಾರು 10,000 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಬೆಂಗಳೂರು ನಗರದಲ್ಲಿ ನಡೆಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.