ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ಬೆಂಗಳೂರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಹಾಗೂ ಮಹಾ ಮಾನವತಾವಾದಿ ಜಗಜ್ಯೋತಿ ಬಸವೇಶ್ವರ ಪುತ್ಥಳಿಯನ್ನು ವಿಧಾನಸೌಧದ ಮುಂಭಾಗ ಪ್ರತಿಷ್ಠಾಪನೆ ಮಾಡಲು ನಾಳೆ ಬೆಳಗ್ಗೆ ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೆಹರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳ ಮಧ್ಯೆದಲ್ಲಿ ಕೆಂಪೇಗೌಡ ಹಾಗೂ ಜಗಜ್ಯೋತಿ ಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಮೆಗಳ ಶಿಲಾನ್ಯಾಸ ಮತ್ತು ಭೂಮಿಪೂಜೆ ನೆರವೇರಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಮಹಾಸ್ವಾಮಿ, ಆದಿಚುಂಚನಗಿರಿ ಮಠದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿ, ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿ, ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತಿತರ ನಾಯಕರಿಗೆ ಖುದ್ದು ಕರೆ ಮಾಡಿ ಆಹ್ವಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪುತ್ಥಳಿಗಳಿಗೆ 8 ಕೋಟಿ ರೂ ಅನುದಾನ: ಪುತ್ಥಳಿಗಳಿಗೆ 8 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕೆಂಪೇಗೌಡ ಹಾಗೂ ಬಸವೇಶ್ವರರ ಅಶ್ವಾರೂಢ ಪ್ರತಿಮೆಗಳನ್ನು ನಿರ್ಮಾಣ ಮಾಡುತ್ತೇವೆ. ಕೆಂಪೇಗೌಡರು ದೂರ ದೃಷ್ಟಿಯಿಂದ ಬೆಂಗಳೂರು ಕಟ್ಟಿದವರು. ಇಷ್ಟು ವರ್ಷವಾದರೂ ಅವರ ಪುತ್ಥಳಿ ಯಾಕೆ ಮಾಡಲಿಲ್ಲ ಎಂಬುದು ಗೊತ್ತಿಲ್ಲ. ಅನೇಕ ಸರ್ಕಾರಗಳು ಬಂದಿವೆ. ಆದರೆ, ಯಾರೂ ಮಾಡಿರಲಿಲ್ಲ.
ಈ ಹಿಂದೆಯೇ ಈ ಪುತ್ಥಳಿ ಮಾಡಬೇಕಿತ್ತು. ಬಸವಣ್ಣ ಅವರು ಜಾತಿ, ಗಂಡು ಹೆಣ್ಣು ಎಂಬ ಬೇದ ತೊಡೆದು ಹಾಕಿ ಕೆಲಸ ಮಾಡಿದ್ದರು. ಜಗಜ್ಯೋತಿ ಬಸವೇಶ್ವರ ಅವರ ಪ್ರತಿಮೆ ಕೂಡ ಆಗಬೇಕಿತ್ತು. ಹಿಂದಿನ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. ಈಗ ಪುತ್ಥಳಿ ಅನಾವರಣಕ್ಕೆ ಸಿಎಂ ಬೊಮ್ಮಾಯಿ ಅನಾವರಣ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಪುತ್ಥಳಿ ಸ್ಥಾಪನಾ ಉಪ ಸಮಿತಿಗೆ ಅಧ್ಯಕ್ಷ: ಪುತ್ಥಳಿ ಸ್ಥಾಪನಾ ಉಪ ಸಮಿತಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಸದಸ್ಯರಾಗಿ ಸಚಿವರಾದ ಸಿ.ಸಿ.ಪಾಟೀಲ್, ಸುನೀಲ್ ಕುಮಾರ್, ಜೆ.ಸಿ.ಮಾಧುಸ್ವಾಮಿ ಇದ್ದು, ಈಗಾಗಲೇ ನಾಲ್ಕೈದು ಸಭೆ ಮಾಡಿದ್ದೇವೆ. ಪ್ರತಿಮೆ ಸಿದ್ದಪಡಿಸಲು ಅನುಮೋದನೆ ನೀಡಲಾಗಿದೆ. ಶೀಘ್ರವೇ ಎರಡೂ ಗಣ್ಯರ ಪುತ್ಥಳಿ ಅನಾವರಣ ಮಾಡುತ್ತೇವೆ. ಬಹಳಷ್ಟು ಜನ ವಿದೇಶಿಗರು ಪ್ರವಾಸಕ್ಕೆ ಬರುವವರು ವಿಧಾನಸೌಧ ನೋಡಲು ಬರುತ್ತಾರೆ. ಇದರಿಂದ ಮತ್ತಷ್ಟು ಮೆರಗು ಬರಲಿದೆ ಎಂದು ಆರ್. ಅಶೋಕ್ ಹೇಳಿದರು.
ಬಸವಣ್ಣ, ಕೆಂಪೇಗೌಡರು ಯಾವುದೇ ಸಮುದಾಯಕ್ಕೆ ಸೇರಿದವರಲ್ಲ. ಬಸವಣ್ಣ ಜಾತಿ ಬಿಟ್ಟು ಬನ್ನಿ ಅಂತ ಕರೆದಿದ್ರು, ಕೆಂಪೇಗೌಡರು ವಿವಿಧ ಪೇಟೆ ಕಟ್ಟಿದವರು. ಇವರಿಗೆ ಜಾತಿ ಲೇಪನ ಕಟ್ಟುವುದು ಬೇಡ. ಹಿಂದಿನ ಸರ್ಕಾರಕ್ಕೆ ನೆನಪಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ನಾವು ನೆನಪು ಮಾಡಿಕೊಂಡಿದ್ದೇವೆ ಎಂದರು.
ಸಿದ್ದರಾಮಯ್ಯ ದಿಕ್ಕು ಕಾಣದ ರಾಜಕಾರಣಿ: ಸಿದ್ದರಾಮಯ್ಯ ಒಂದು ರೀತಿಯ ದಿಕ್ಕು ಕಾಣದೇ ಇರುವ ರಾಜಕಾರಣಿ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಮಾಡದ ಹಿನ್ನೆಲೆ ಹೀನಾಯ ಸೋಲು ಕಂಡರು. ಬಾದಾಮಿಗೆ ಹೋದರು, ಅಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದರೆ ಜನ ಯಾಕೆ ಓಡಿಸಿದ್ರು. ಚಿಮ್ಮನಕಟ್ಟಿ ವೇದಿಕೆ ಮೇಲೆ ಮೋಸ ಮಾಡಿದ್ರು ಅಂತ ಹೇಳಿದ್ರು.
ಚಿಮ್ಮನ ಕಟ್ಟಿ ಅವರೇ ವೇದಿಕೆ ಮೇಲಿಂದ ಓಡಿಸಿದ್ರು. ಸಿದ್ದರಾಮಯ್ಯ ಕೆಲಸ ಮಾಡಿದ್ರೆ ಚಾಲೆಂಜ್ ಮಾಡಿ ಬಾದಾಮಿಯಲ್ಲಿ ನಿಲ್ತಿದ್ರು. ಆದರೆ, ಈಗ ಕೋಲಾರಕ್ಕೆ ಬಂದಿದ್ದಾರೆ. ಕ್ಷೇತ್ರಾಂತರ ಮಾಡಿಕೊಂಡು ಓಡಾಡ್ತಿದ್ದಾರೆ.
ಡಾ.ಜಿ. ಪರಮೇಶ್ವರ್ ಅವರನ್ನು ಸೋಲಿಸಿದಿರಿ, ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿದಿರಿ. ಇಬ್ಬರೂ ಕಾಯುತ್ತಿದ್ದಾರೆ ನಿಮ್ಮನ್ನು ಸೋಲಿಸಲು. ಎಚ್ಚರದಿಂದ ಇರಿ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದರು.
ನೆಲೆ ಇಲ್ಲದ ಸಿದ್ದರಾಮಯ್ಯ: ಒಂದು ಕಡೆ ನಿಂತು ರಾಜಕಾರಣ ಮಾಡಿ. ಕ್ಷೇತ್ರದ ಜನತೆ ಮೇಲೆ ವಿಶ್ವಾಸ ಇಡಿ, ಇಂತಹ ಕೆಲಸ ಮಾಡಿಕೊಡುತ್ತೇನೆಂದು ಹೇಳಿ. ಅದು ಬಿಟ್ಟು ಕೆಲಸ ಮಾಡದೆ ಕ್ಷೇತ್ರ ಅಲೆಯುತ್ತಿದ್ದೀರಿ. ಒಂದು ರೀತಿಯ ನೆಲೆ ಇಲ್ಲದ ಸಿದ್ದರಾಮಯ್ಯ ಆಗಿದ್ದಾರೆ. ಬಾದಾಮಿ, ಚಾಮುಂಡೇಶ್ವರಿ ಗಿಂತ ಕೋಲಾರದಲ್ಲಿ ಪರದಾಡುತ್ತೀರಿ. ಕೋಲಾರದ ಶ್ರೀನಿವಾಸ್ ಗೌಡರಿಗೆ ಆಮಿಷ ವೊಡ್ಡಿರೋದು ಎಲ್ಲರಿಗೂ ಗೊತ್ತಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು ಇಡುವಂತೆ ಫಿಲ್ಮ್ ಚೇಂಬರ್ನಿಂದ ಬಿಬಿಎಂಪಿಗೆ ಮನವಿ