ಕರ್ನಾಟಕ

karnataka

ETV Bharat / state

ಪ್ರತ್ಯೇಕ ಧರ್ಮಕ್ಕೆ ಕೈ ಹಾಕಿ ಕಾಂಗ್ರೆಸ್ ಮೂತಿಯನ್ನೇ ಸುಟ್ಟುಕೊಂಡಿದೆ : ಸಚಿವ ಆರ್ ಅಶೋಕ್ - ಬೆಂಗಳೂರು ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಆರ್​ ಅಶೋಕ್ ಹೇಳಿಕೆ

ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನಮಗೆಲ್ಲ ಅಪಾರ ಗೌರವವಿದೆ. ಅವರ ಮಗನಾಗಿ ಬೇರೆಯವರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು. ಆಧಾರವಿಲ್ಲದೇ ಸುಮ್ಮನೆ ಮಾತನಾಡುವುದು ಕುಮಾರಸ್ವಾಮಿ ಅವರಿಗೆ ಅಭ್ಯಾಸ. ಅದಕ್ಕೆ ವಾಚಾಳಿತನ ಅನ್ನುತ್ತಾರೆ. ಇನ್ನಾದರೂ ಅವರು ಇಂತಹ ಸುಳ್ಳು ‌ಆರೋಪ ಮಾಡುವುದನ್ನು ಬಿಡಲಿ. ಅವರ ಘನತೆಗೆ ತಕ್ಕಂತೆ ಮಾತನಾಡುವುದನ್ನು ಕಲಿಯಲಿ‌..

r-ashok-statement-on-separate-lingayat-religion-protest
ಸಚಿವ ಆರ್ ಅಶೋಕ್

By

Published : Sep 3, 2021, 3:49 PM IST

ಬೆಂಗಳೂರು :ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಕೈಹಾಕಿ ಕಾಂಗ್ರೆಸ್ ಮೊದಲು ಕೈ ಸುಟ್ಟುಕೊಂಡಿತ್ತು. ಈಗ ಮೂತಿಯನ್ನೇ ಸುಟ್ಟುಕೊಂಡಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಎಂ ಬಿ ಪಾಟೀಲ್‌ರ ಪ್ರತ್ಯೇಕ ಧರ್ಮದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಮತ್ತೆ ಧರ್ಮದ ವಿಚಾರಕ್ಕೆ ಕೈ ಹಾಕಿದರೆ ಕಾಂಗ್ರೆಸ್‌ಗೆ ಮತ್ತೊಮ್ಮೆ ಜನ ಪಾಠ ಕಲಿಸ್ತಾರೆ. ಈಗ ಏನೋ 70 ಸೀಟಾದರೂ ಬಂದಿದೆ. ಆ ಮೇಲೆ 20 ಸೀಟಿಗೆ ಬಂದು ಬಿಡುತ್ತದೆ. ಇದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ ಎಂದು ಕಿಡಿ ಕಾರಿದರು.

ಪ್ರತ್ಯೇಕ ಧರ್ಮಕ್ಕೆ ಕೈಹಾಕಿ ಕಾಂಗ್ರೆಸ್ ಮೂತಿಯನ್ನೇ ಸುಟ್ಟುಕೊಂಡಿದೆ..

ಜೆಡಿಎಸ್‌ನದ್ದು ಹಣ ವಸೂಲಿ ಸಂಸ್ಕೃತಿ :ಹಣ ಕೊಡುವುದು, ತೆಗೆದುಕೊಳ್ಳುವುದು ಬಿಜೆಪಿ ಸಂಸ್ಕೃತಿಯಲ್ಲಿ ಇಲ್ಲ. ಜೆಡಿಎಸ್‌ನವರದ್ದು ಹಣ ವಸೂಲಿ ಸಂಸ್ಕೃತಿ ಇರಬಹುದು. ನಮ್ಮ ಪಕ್ಷದಲ್ಲಿ ಆ ರೀತಿ ಇಲ್ಲ. ಅರುಣ್‌ ಸಿಂಗ್ ಅವರಂತಹ ಅತ್ಯಂತ ಶಿಸ್ತಿನ, ಸುಸಂಸ್ಕೃತ, ಪ್ರಾಮಾಣಿಕ ರಾಜಕಾರಣಿಯ ಬಗ್ಗೆ ಇಂತಹ ಕೀಳುಮಟ್ಟದ ಆಪಾದನೆ ಮಾಡುವುದು ಒಬ್ಬ ಮಾಜಿ ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ ಎಂದು ಹೆಚ್​ಡಿಕೆ ವಿರುದ್ಧ ಸಚಿವ ಆರ್. ಅಶೋಕ್ ಕಿಡಿಕಾರಿದರು.

ಅವರ ತಂದೆಯನ್ನು ನೋಡಿ ಕಲಿಯಲಿ : ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನಮಗೆಲ್ಲ ಅಪಾರ ಗೌರವವಿದೆ. ಅವರ ಮಗನಾಗಿ ಬೇರೆಯವರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು. ಆಧಾರವಿಲ್ಲದೇ ಸುಮ್ಮನೆ ಮಾತನಾಡುವುದು ಕುಮಾರಸ್ವಾಮಿ ಅವರಿಗೆ ಅಭ್ಯಾಸ. ಅದಕ್ಕೆ ವಾಚಾಳಿತನ ಅನ್ನುತ್ತಾರೆ. ಇನ್ನಾದರೂ ಅವರು ಇಂತಹ ಸುಳ್ಳು ‌ಆರೋಪ ಮಾಡುವುದನ್ನು ಬಿಡಲಿ. ಅವರ ಘನತೆಗೆ ತಕ್ಕಂತೆ ಮಾತನಾಡುವುದನ್ನು ಕಲಿಯಲಿ‌ ಎಂದು ಕಿಡಿಕಾರಿದರು.

ಅಮಿತ್ ಶಾ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ :ಮುಖ್ಯಮಂತ್ರಿ ಯಾರಿರುತ್ತಾರೋ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸೋದು ಸಂಪ್ರದಾಯ. ಅಮಿತ್ ಶಾ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ ಎಂದರು. ಯಡಿಯೂರಪ್ಪ ನಮ್ಮ ಹಿರಿಯ ನಾಯಕರು. ಅವರನ್ನು ಪಕ್ಷ ಯಾವತ್ತೂ ಮರೆಯೋದಿಲ್ಲ. ಬಿಎಸ್​​ವೈ ರಾಜ್ಯ ಪ್ರವಾಸವನ್ನು ಪಕ್ಷ ನಿರ್ಧರಿಸುತ್ತೆ. ಯಡಿಯೂರಪ್ಪ ಎಲ್ಲೆಲ್ಲಿ ಪ್ರವಾಸ ಮಾಡಬೇಕು ಅನ್ನೋದನ್ನು ಕಟೀಲ್ ತಿಳಿಸುತ್ತಾರೆ ಎಂದರು.

ಬೆಂಗಳೂರು‌ ರಸ್ತೆ ಗುಂಡಿ ಸಂಬಂಧ ಸಭೆ : ಬೆಂಗಳೂರು ಮಳೆ ಹಾನಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಪ್ರತಿ ಬಾರಿ ಮಳೆ ಬಂದಾಗಲೂ ಗುಂಡಿ ಉಂಟಾಗುವುದು ಮಾಮೂಲಿ. ಬೆಂಗಳೂರಿನಲ್ಲಿ ಅತ್ಯಧಿಕ ಮಳೆಯಾಗುತ್ತಿದೆ. ಹೀಗಾಗಿ, ರಸ್ತೆಗಳ ಅವ್ಯವಸ್ಥೆಗೆ ಕಾರಣವಾಗಿದೆ. ಇನ್ನೆರಡು ದಿನಗಳಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆ ಕರೆಯುತ್ತೇನೆ. ರಸ್ತೆಗುಂಡಿ ಮುಚ್ಚಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

775 ಕೋಟಿ ರೂ. ಹಣ ಕೇಂದ್ರದಿಂದ ಬರಬೇಕಿದೆ : 2020-21ನೇ ಸಾಲಿನಲ್ಲಿ ಭಾರೀ ಮಳೆಯಿಂದ ರಾಜ್ಯದಲ್ಲಿ ಹಾನಿಯಾಗಿದೆ. 5600 ಕೋಟಿ ನಷ್ಟ ಉಂಟಾಗಿದೆ ಎಂದು ಕೇಂದ್ರಕ್ಕೆ ವರದಿ ನೀಡಿದ್ದೆವು. ಕೇಂದ್ರದ ತಂಡ ರಾಜ್ಯದಲ್ಲಿ ಪ್ರವಾಸ ಮಾಡಿ ಹಾನಿಯ ಪರಿಶೀಲನೆ ಮಾಡಿ ಕೇಂದ್ರಕ್ಕೆ ಹಾನಿಯ ವರದಿ ನೀಡಲಿದೆ. ಎನ್​ಡಿಆರ್​ಎಫ್ ನಿಯಮ ಪ್ರಕಾರ 775 ಕೋಟಿ ರೂ. ನಮಗೆ ಬರಬೇಕಿದೆ. ಕೇಂದ್ರದ ಪರಿಶೀಲನೆ ಬಳಿಕ ಈ ಹಣ ಬರಲು ಅನುಕೂಲ ಆಗಲಿದೆ ಎಂದು ತಿಳಿಸಿದರು.

ಕಂದಾಯ ಗ್ರಾಮವನ್ನಾಗಿ ಮಾಡಲು ಆದೇಶ : ಕುರುಬ, ಬಂಜಾರ, ಹಾಡಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಆದೇಶ ಹೊರಡಿಸಿದ್ದೇವೆ. ಹಕ್ಕಿಪಿಕ್ಕಿ ಜನಾಂಗದ ಗ್ರಾಮಗಳ ಘೋಷಣೆ ಮಾಡಲು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.

ಸರ್ವೇಯರ್ ನೇಮಕ :820 ಜನ ಸರ್ವೇಯರ್ ನೇಮಕಕ್ಕೆ ಆದೇಶ ಕೊಟ್ಟಿದ್ದೇವೆ. ಇನ್ನು, 600 ಮಂದಿ ಸರ್ವೇಯರ್​​ ನೇಮಕ ಮಾಡಿಕೊಳ್ಳುತ್ತಿದ್ದೇವೆ. ಪೆಂಡಿಂಗ್ ಇರುವ ಎಲ್ಲ ಸರ್ವೆ ಅರ್ಜಿಗಳನ್ನು ಎರಡೇ ತಿಂಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದರು.

ಸೆಸ್​​ ಇಳಿಕೆ : ಇಂಧನ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಲು ತಬ್ಬಿಬ್ಬಾದ ಆರ್.ಅಶೋಕ್, ಸೆಸ್ ಇಳಿಕೆ ಬಗ್ಗೆ ಸಂಪುಟದಲ್ಲಿ ಚರ್ಚೆ ಮಾಡುವ ವಿಚಾರ ಗೊತ್ತಿಲ್ಲ. ಸೆಸ್ ಇಳಿಕೆ ಮಾಡುವುದರ ಬಗ್ಗೆ ಯೋಚನೆ ಮಾಡ್ತೇವೆ ಎಂದರು.

ABOUT THE AUTHOR

...view details