ಬೆಂಗಳೂರು:ಜಾತಿ ಗಣತಿ ಮೂಲ ಪ್ರತಿ ಕಳವಿನ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಈ ಬಗ್ಗೆ ತನಿಖೆಯಾಗಲಿ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ. ವಿಧಾನಸೌಧದ ವಿರೋಧ ಪಕ್ಷದ ನಾಯಕನ ಕಚೇರಿಯಲ್ಲಿ ಮಾತನಾಡಿದ ಅವರು, ವರದಿ ಸ್ವೀಕಾರಕ್ಕೆ ತರಾತುರಿ ಏಕೆ?. ವರದಿ ಮೂಲ ಯಾರು ಕದ್ದಿದ್ದಾರೆ ಅನ್ನೋದು ತನಿಖೆ ಆಗಬೇಕು. ಅದರ ಮೂಲ ಕಳೆದುಹೋಗಿದೆ. ಅವರೇ ಬರೆಸಿ ವರದಿ ಮಾಡಿದ್ದಾರಾ?. ವರದಿ ವೈಜ್ಞಾನಿಕವಾದರೆ ಕಾರ್ಯದರ್ಶಿ ಏಕೆ ಸಹಿ ಹಾಕಿಲ್ಲ?. ಯಾರ ಮನೆಯಲ್ಲಿ ಬರೆದಿದ್ದಾರೆ, ಎಲ್ಲಿ ಕೂತು ಬರೆದಿದ್ದಾರೆ ಎಂಬುದು ಗೊತ್ತಾಗಬೇಕು ಎಂದರು.
ಕಾಂತರಾಜು ವರದಿ ಗೊಂದಲಕ್ಕೆ ಕಾರಣವಾಗಿದೆ. ಕಾಂತರಾಜು ವರದಿ ಘೋಷಣೆ ಮಾಡುವಾಗ ಸಮಿತಿ ಮಾಡದೆ ಏಕಾಏಕಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಅದು ಹತ್ತು ವರ್ಷ ಹಳೆಯ ವರದಿ. ಜನಸಂಖ್ಯೆ ಬದಲಾವಣೆ ಆಗಿದೆ. ನಮ್ಮ ಮನೆಗೆ ಬಂದಿಲ್ಲ ಎಂದು ಸಾರ್ವಜನಿಕರಿಂದ ದೂರು ಇದೆ. ಕಾಂತರಾಜು ವರದಿಗೆ ಮೆಂಬರ್ ಸೆಕ್ರೆಟರಿ ಸಹಿ ಹಾಕಿಲ್ಲ. ಅಲ್ಲದೆ ವರದಿಯ ಮೂಲ ಪ್ರತಿ ಕಾಣೆಯಾಗಿದೆ ಎಂದು ತಿಳಿಸಿದರು.
168 ಕೋಟಿ ರೂಪಾಯಿ ಸರ್ಕಾರದ ಹಣ ಖರ್ಚು ಮಾಡಿದ ವರದಿ ಮೂಲ ಪ್ರತಿ ಕಾಣೆಯಾಗಿದೆ ಎಂದರೆ ಸರ್ಕಾರ ಏಕೆ ತನಿಖೆ ಮಾಡಿಲ್ಲ?. ಇದರ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ. ಸರ್ಕಾರ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಯಾರನ್ನೋ ಕಾಪಾಡುವ ಕೆಲಸ ಮಾಡುತ್ತಿದೆ. ಕಳ್ಳತನದ ಬಗ್ಗೆ ತನಿಖೆ ಆಗಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.
ಜನಸಂಖ್ಯೆ ಆಧಾರದಲ್ಲಿ ಸಮೀಕ್ಷೆಗೆ ನಮ್ಮ ವಿರೋಧ ಇಲ್ಲ. ಆದರೆ ಸರಿಯಾದ ಮಾನದಂಡದಲ್ಲಿ ಸಮೀಕ್ಷೆ ಮಾಡಬೇಕು. ಬೇರೆ ಬೇರೆ ಸಮುದಾಯದ ಮಠಾಧಿಪತಿಗಳು ವರದಿ ಸರಿ ಇಲ್ಲ ಎಂದಿದ್ದಾರೆ. ವಿರೋಧದ ಪತ್ರಕ್ಕೆ ಸರ್ಕಾರದ ಮೂವರು ಸಚಿವರು ಇದಕ್ಕೆ ಸಹಿ ಹಾಕಿದ್ದಾರೆ. ವರದಿಯನ್ನು ಮಂಡನೆ ಮಾಡಲು ನಾವು ಪ್ರಯತ್ನ ಪಟ್ಟಿಲ್ಲ. ಅದಕ್ಕೆ ನಮಗೆ ಪತ್ರ ಬರೆದರೂ ನಾವು ಅದರ ತನಿಖೆ ಮಾಡಿಲ್ಲ. ಜಾತಿಗಣತಿ ವರದಿಗೆ ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲೇ ವಿರೋಧ ಇದೆ. ಅವರ ಜೊತೆ ಮೊದಲು ಮಾತನಾಡಲಿ. ತರಾತುರಿಯಲ್ಲಿ ವರದಿ ಸ್ವೀಕಾರ ಏಕೆ? ವರದಿಯನ್ನು ನೀವೇ ಬರೆಸಿರಬಹುದು ಎಂಬ ಅನುಮಾನ ಇದೆ. ಕದ್ದವರ ವಿರುದ್ಧ ಏಕೆ ಕ್ರಮ ಇಲ್ಲ. ಇದರ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂಬ ಅನುಮಾನ ಇದೆ ಎಂದರು.
ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತೋ ಕೆಲಸ ಬಿಡಬೇಕು. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ತೃಪ್ತಿ ಪಡಿಸಲು ಬೇರೆ ದಾರಿ ಹುಡುಕಿ. ಜಾತಿಯ ವಿಷ ಬೀಜ ಬಿತ್ತಬೇಡಿ. ಸಹಿ ಹಾಕಲು ಮೈಮರೆತರೆ ವರದಿಯಲ್ಲಿ ಏನೆಲ್ಲ ಗೊಂದಲ ಇರಬಹುದು ಎಂದರು.