ಬೆಂಗಳೂರು:ಭೂ ಸುಧಾರಣಾ ಕಾಯ್ದೆಯಲ್ಲಿನ 79 ಎ ಮತ್ತು ಬಿ ಕೈಬಿಡುವ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ಟೀಕಿಸುವ ಮೊದಲು ಈ ವಿಚಾರದಲ್ಲಿ ತಮ್ಮ ಪಕ್ಷದ ನಿಲುವೇನು? ಎನ್ನುವುದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧರಿಸಿಕೊಂಡು ಬರಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಲ್ಲಿ ಸರ್ಕಾರ ಹಗರಣ ನಡೆಸಿದೆ. ಇದ್ದ ಪ್ರಕರಣಗಳನ್ನು ಕೈಬಿಟ್ಟಿದ್ದಾರೆ. ಇದರಿಂದ 10 ಸಾವಿರ ಕೋಟಿ ರೂ ಲೂಟಿ ಹೊಡೆಯಲಾಗಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಆದರೆ ಉಳ್ಳವರ, ಬಲಾಢ್ಯರ ಕೇಸ್ಗಳನ್ನು ಹಿಂದೆ ಇವರೇ ಮುಗಿಸಿದ್ದಾರೆ. ಬಡವರ ಕೇಸ್ ಮಾತ್ರ ಬಾಕಿ ಉಳಿದಿವೆ. ಈಗ ದೊಡ್ಡ ಹಗರಣ ನಡೆದಿದೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಅಧಿವೇಶನದಲ್ಲಿ ಅವರ ಪಕ್ಷದ ಅಧ್ಯಕ್ಷರೇ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಲ್ಲಿನ 79 ಎ ಮತ್ತು ಬಿ ತೆಗೆಯಬೇಕು ಎಂದಿದ್ದರು. ಈಗ ಇವರು ವಿರೋಧ ಮಾಡುತ್ತಿದ್ದಾರೆ. ಈ ರೀತಿ ಒಳಗೊಂದು ಹೊರಗೊಂದು ಧೋರಣೆ ಸರಿಯಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಬೇಡ. ಮಲಗಿದ್ದವರನ್ನು ಎಬ್ಬಿಸಬಹುದು ಆದರೆ ಮಲಗಿದಂತೆ ನಾಟಕ ಮಾಡುವವರನ್ನು ಎಬ್ಬಿಸುವುದು ಕಷ್ಟ. ಅವರ ಪಕ್ಷದ ನಿಲುವು ಏನು ಎನ್ನುವುದನ್ನು ಮೊದಲು ಅವರು ನಿರ್ಧರಿಸಿಕೊಂಡು ಬರಲಿ ಎಂದರು.