ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯರಿಂದ ಪಿಎಫ್ಐ ಭಾಗ್ಯ: ಕಂದಾಯ ಸಚಿವ ಅಶೋಕ್ ಲೇವಡಿ

ಕಂದಾಯ ಸಚಿವ ಆರ್ ಅಶೋಕ್ ಅವರು ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಿಎಫ್​ಐ ಭಾಗ್ಯ ಪೋಸ್ಟರ್​ ಬಿಡುಗಡೆ ಮಾಡಿ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದ್ದಾರೆ.

ಕಂದಾಯ ಸಚಿವ ಅಶೋಕ್
ಕಂದಾಯ ಸಚಿವ ಅಶೋಕ್

By

Published : Oct 3, 2022, 8:08 PM IST

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಆರ್ ಅಶೋಕ್ ನಡುವಿನ ವಾಕ್ಸಮರ ಮುಂದುವರಿದಿದೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಅಶೋಕ್ ಪಿಎಫ್ಐ ಭಾಗ್ಯ ಪೋಸ್ಟರ್ ಬಿಡುಗಡೆ ಮಾಡಿ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದರು.

ಸದ್ಯ ರಾಹುಲ್ ಗಾಂಧಿ ಜತೆ ಮೈಸೂರಿನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿರುವ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ನಡುವಿನ ವಾಕ್ಸಮರ ಇನ್ನಷ್ಟು ಮುಂದುವರಿಯುವ ಸಾಧ್ಯತೆ ಇದೆ.

ಇಂದು ಸುದ್ದಿಗೋಷ್ಠಿಯಲ್ಲಿ ಆರ್. ಅಶೋಕ್, ಸಿದ್ದರಾಮಯ್ಯ ಅವರು ಅವರ ಪತ್ರಿಕಾ ಹೇಳಿಕೆಯಲ್ಲಿ ಪಿಎಫ್ಐ ನಿಷೇಧ ಬಗ್ಗೆ ಮೊದಲೇ ವರದಿ ನೀಡಿದ್ದೆ ಎಂದಿದ್ದಾರೆ. ನಾನು ಹೇಳಿದ ಬಳಿಕ ಬ್ಯಾನ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಇದೇ ಪಿಎಫ್ಐ, ಕೆಡಿಎಫ್ ಬಗ್ಗೆ 1,600 ಕೇಸ್ ಹಾಕಿದ್ರು. ಪೊಲೀಸರ ಮೇಲೆ ಸಾರ್ವಜನಿಕರ ಮೇಲೆ ಹಲ್ಲೆ ಅಂತ ದಾಖಲಾಗಿತ್ತು. 2012 ರ ಡಿ.10 ರಲ್ಲಿ ತನ್ವೀರ್ ಸೇಠ್ ಪತ್ರ ಬರೆದು ಪಿಎಫ್ಐ ಅಮಾಯಕರು, ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ಕೇಸ್ ವಾಪಸ್ ಪಡೆಯಬೇಕು ಅಂತ ಮನವಿ ಮಾಡುತ್ತಾರೆ.

ಈಗ ಹೇಳಿ ದೇಶ ದ್ರೋಹಿಗಳಿಗೆ ಬೆಂಬಲ ಕೊಟ್ಟಿಲ್ವಾ?;ತಸ್ಲೀಮಾ ನಸ್ರೀನ್ ಪುಸ್ತಕದ ಬಗ್ಗೆ ಇರೋ ಕೇಸ್ ಅದು. ಕಾಂಗ್ರೆಸ್​​ನವರು ಅದನ್ನು ಮಾನ್ಯ ಮಾಡಲು ಅಂದಿನ ಡಿಜಿ - ಐಜಿಪಿ ಸರ್ಕಾರಕ್ಕೆ ಸಲಹೆ ಕೇಳುತ್ತಾರೆ. ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್ ಪಡೆಯಬಾರದು ಅಂತ ಪೋಲಿಸ್ ಇಲಾಖೆ ರಿಪೋರ್ಟ್ ಕೊಡುತ್ತದೆ. ಲಾ ಕಮಿಟಿ ಕೂಡ ವಾಪಸ್ ಪಡೆಯುವುದು ಸಮಾಜಕ್ಕೆ ಮಾರಕ ಎಂದು ವರದಿ ಕೊಡ್ತಾರೆ.

ಸಿದ್ದರಾಮಯ್ಯ ಈ ಎಲ್ಲ 1,600 ಜನ ವಿಧ್ವಂಸಕ ಕೃತ್ಯ ಎಸಗಿದವರ ಮೇಲಿನ ಪ್ರಕರಣ ವಾಪಸ್ ಪಡೆಯುವ ಕೆಲಸ ಮಾಡ್ತಾರೆ. ಈಗ ಹೇಳಿ, ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟಿಲ್ವಾ ಎಂದು ಪ್ರಶ್ನಿಸಿದ್ದರು.

ಅಂದಿನ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಹೇಳಿದ್ದರು. ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯೋ ಪ್ರಶ್ನೆಯೇ ಇಲ್ಲ ಅಂತ. ಈಗ ಸಿದ್ದರಾಮಯ್ಯ ನಾವೇ ಹೇಳಿದ್ದು ಬ್ಯಾನ್ ಮಾಡೋಕೆ ಅಂತಿದಾರೆ. ಇವರದ್ದು ಗೋಸುಂಬೆ ವರ್ತನೆ ಅಲ್ಲವೇ. ಕುಟ್ಟಪ್ಪ, ರುದ್ರೇಶ್, ಮಡಿವಾಳ ಇವರ ಹತ್ಯೆ ಬಳಿಕ ಕೇಸ್ ಹಾಕಲು ಹಿಂಜರಿದರು.

ಇದೆಲ್ಲವನ್ನೂ ನೋಡಿದ್ರೆ ಕಾಂಗ್ರೆಸ್ ಈಗ ಸೂತಕದ ಮನೆಯಾಗಿದೆ. ಕೊಡಗು, ಮೈಸೂರು, ಮಂಗಳೂರಿನಲ್ಲಿ ಇವರಿಗೆ ವಿದೇಶಿ ಟ್ರೈನಿಂಗ್ ನೀಡಲಾಗಿದೆ ಎನ್ನುವ ಮಾಹಿತಿ ಅಧಿಕೃತವಾಗಿದೆ. ಬೈಕಲ್ಲಿ ಹೋಗುವಾಗ ಹೇಗೆ ಕತ್ತು ಕಡಿಯಬೇಕು. ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಹೇಗೆ ಮಾಡಬೇಕು ಎಂದು ಹೇಳಿದ್ದಾರೆ.

ಕೇರಳ ನಿವೃತ್ತ ಪೊಲೀಸರು ಬಂದು ಹೇಗೆ ಕೇಸ್ ಆಗದ ರೀತಿ ಹತ್ಯೆ ಮಾಡಬೇಕು ಅಂತ ಟ್ರೈನಿಂಗ್ ನೀಡಿರೋ ಬಗ್ಗೆ ವರದಿಯಾಗಿದೆ. ಹೀಗಿರುವಾಗ ಸಿದ್ದರಾಮಯ್ಯ ನಾವೇ ಹೇಳಿದ್ದು, ಅದಕ್ಕೆ ಬ್ಯಾನ್ ಮಾಡಿದೆ ಅಂತ ಹೇಳಿಕೊಳ್ತಾರೆ. ಅವರಿಗೆ ನಾಚಿಕೆಯಾಗಬೇಕು. ಕೂಡಲೇ ಕ್ಷಮೆ ಕೇಳಬೇಕು. ಪಿಎಫ್ಐ ನವರು ಇರುವ 175 ಕೇಸ್ ದಾಖಲಾಗಿದೆ.

ಅವರಿಂದ ಪ್ರಾಯೋಜಿತರಾದ ಕೆಎಫ್​​ಡಿ ಭಾಗಿಯಾಗಿರೋ ಕೇಸ್ ಇದೆ. ಸಿದ್ದರಾಮಯ್ಯ ಹಲವು ಭಾಗ್ಯ ನೀಡಿದ್ದಾರೆ. ಪಿಎಫ್ಐ ಭಾಗ್ಯ ಸಹ ನೀಡಿದ್ದಾರೆ ಎನ್ನುವುದು ಈಗ ಅರ್ಥವಾಗುತ್ತಿದೆ ಎಂದಿದ್ದರು.

ಸಿದ್ದರಾಮಯ್ಯ ಪ್ರತಿಕ್ರಿಯೆ:ಇದಕ್ಕೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ತಮಗೆ ವಹಿಸಿದ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಲಾಗದೇ ನಾಡಿನ ಜನರನ್ನು ಮಳೆ - ಪ್ರವಾಹದ ಪ್ರಪಾತದಲ್ಲಿ ಮುಳುಗಿಸಿದ ಸಚಿವ ಆರ್.ಅಶೋಕ್ ಅವರ ಬಾಯಲ್ಲಿ ಸರ್ಕಾರ ಹಳೆ ಸುಳ್ಳನ್ನು ಹೊಸದಾಗಿ ಹೇಳಿಸಿದೆ.

ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಿಎಫ್‍ಐ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಆರೋಪದ ಬಗ್ಗೆ ನಾನೇ ನಾಲ್ಕು ಬಾರಿ ಸರ್ಕಾರಕ್ಕೆ ಪತ್ರ ಬರೆದು, ನಮ್ಮ ಸರ್ಕಾರದ ಅವಧಿಯಲ್ಲಿ ಯಾವ ಪಿಎಫ್‍ಐ ಕಾರ್ಯಕರ್ತರ ವಿರುದ್ಧದ ಪ್ರಕರಣವನ್ನು ಹಿಂದಕ್ಕೆ ಪಡೆಯಲಾಗಿತ್ತು ಎನ್ನುವ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಉತ್ತರ ಕೇಳಿದ್ದೆ. ಆದರೆ, ನನಗೆ ಬಿಜೆಪಿ ಸರ್ಕಾರವೇ ಕೊಟ್ಟಿರುವ ಉತ್ತರದಲ್ಲಿ ಎಲ್ಲೂ ಪಿಎಫ್‍ಐ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವ ಉಲ್ಲೇಖಗಳೇ ಇಲ್ಲ. ಇದನ್ನೇ ನಾನು ನಾಲ್ಕು ದಿನಗಳ ಹಿಂದೆ ಬಿಡುಗಡೆ ಮಾಡಿದ್ದ ಪತ್ರಿಕಾ ಹೇಳಿಕೆಯಲ್ಲೂ ತಿಳಿಸಿದ್ದೆ.

ಪ್ರಕರಣ ಹಿಂಪಡೆದ ಬಗ್ಗೆ ಉಲ್ಲೇಖ:ಆ ಹೇಳಿಕೆಯಲ್ಲೇ ನಾನು ಶಿವಮೊಗ್ಗ, ಹಾಸನದಲ್ಲಿ “ಫರ್ದಾ ಏ ಫರ್ದಾ” ಲೇಖನ ವಿರೋಧಿಸಿ ನಡೆದಿದ್ದ ಪ್ರತಿಭಟನೆಗಳನ್ನೂ ಉಲ್ಲೇಖಿಸಿ ಈ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದ್ದನ್ನು ಹೇಳಿದ್ದೆ. ಈ ಪ್ರಕರಣಗಳಲ್ಲಿ ಪಿಎಫ್‍ಐ ಕಾರ್ಯಕರ್ತರು ಇದ್ದರು ಎನ್ನುವ ಬಗ್ಗೆ ಬಿಜೆಪಿ ಸರ್ಕಾರವೇ ನನಗೆ ಕೊಟ್ಟ ಉತ್ತರದಲ್ಲಿ ಉಲ್ಲೇಖಗಳಿಲ್ಲ.

ಬಿಜೆಪಿ ಸರ್ಕಾರ ನನಗೆ ನೀಡಿರುವ ಉತ್ತರದಲ್ಲಿ ನಮ್ಮ ಸರ್ಕಾರ ರೈತರು, ಕಾರ್ಮಿಕರು, ಪೌರ ಕಾರ್ಮಿಕರು, ಕಬ್ಬು ಬೆಳೆಗಾರರು, ಕಮ್ಮುನಿಸ್ಟ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವ ಬಗ್ಗೆ ಉಲ್ಲೇಖಗಳಿವೆ.

ಬಿಜೆಪಿ ಮುಂದೆ ಬಿಟ್ಟಿದೆ: ಆರ್. ಅಶೋಕ್ ಅವರು ಇವುಗಳ ಬಗ್ಗೆ ಏನನ್ನೂ ಪ್ರಸ್ತಾಪ ಮಾಡಿಲ್ಲ. ಯಾವುದೇ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ಒಂದೇ ಸಮುದಾಯಕ್ಕೆ, ಒಂದೇ ಕೋಮಿಗೆ ಸೇರಿದವರು ಎನ್ನುವ ಒಂದೇ ಕಾರಣದಿಂದ ಎಲ್ಲರನ್ನೂ ಪಿಎಫ್‍ಐ ಸಂಘಟನೆಯ ಕಾರ್ಯಕರ್ತರು ಎಂದು ಬಿಂಬಿಸುವುದು, ಪಿಎಫ್‍ಐಗೂ ತಮಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಆರೋಪಿಗಳನ್ನೂ ಪಿಎಫ್‍ಐ ಸಂಘಟನೆಗೆ ಜಮೆ ಮಾಡುವ ಷಡ್ಯಂತ್ರಕ್ಕೆ ಸಚಿವ ಆರ್. ಅಶೋಕ್ ಅವರನ್ನು ಬಿಜೆಪಿ ಮುಂದೆ ಬಿಟ್ಟಿದೆ ಎಂದು ತಿಳಿಸಿದ್ದಾರೆ.

ಪಾಂಡಿತ್ಯ ಪ್ರದರ್ಶನ: ಸಚಿವ ಆರ್. ಅಶೋಕ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿರುವ ಆರೋಪಿಗಳು ಪಿಎಫ್‍ಐ ಕಾರ್ಯಕರ್ತರಾಗಿದ್ದರು ಎನ್ನುವುದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಪಿಎಫ್‍ಐ ಸದಸ್ಯತ್ವದ ದಾಖಲೆಗಳನ್ನೂ ನೀಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರ ನನಗೆ ಕೊಟ್ಟಿರುವ ಉತ್ತರದಲ್ಲಿ ಇವುಗಳ ಪ್ರಸ್ತಾಪವೇ ಇಲ್ಲ. ತನ್ನ ತಟ್ಟೆಯಲ್ಲಿರುವ ಸತ್ತ ಹೆಗ್ಗಣವನ್ನು ಪಕ್ಕದವರ ತಟ್ಟೆಗೆ ಬಿಸಾಡುವ ಪಾಂಡಿತ್ಯವನ್ನು ಬಿಜೆಪಿ ಪ್ರದರ್ಶಿಸಿದೆ. ಇದಕ್ಕೆ ಬಿಜೆಪಿ ಶಾಸಕ ಬಸವಗೌಡ ಯತ್ನಾಳ್ ಅವರ ಹೇಳಿಕೆಯೇ ಸಾಕ್ಷಿ.

ಮಾಧ್ಯಮದ ಎದುರು ಷಡ್ಯಂತ್ರದ ಮಾತು: “ಪಿಎಫ್‍ಐ ಕಾಂಗ್ರೆಸ್ ನ ಓಟಿನ ಬ್ಯಾಂಕನ್ನು ಛಿದ್ರ ಮಾಡುತ್ತಿತ್ತು” ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸತ್ಯ ತಾನೇ? ಕಾಂಗ್ರೆಸ್ ಓಟಿನ ಬ್ಯಾಂಕನ್ನು ಛಿದ್ರ ಮಾಡುವವರಿಗೆ ಬಿಜೆಪಿ ಬೆಂಬಲಿಸುತ್ತಿರಲಿಲ್ಲವೇ? ರಾಜ್ಯದಲ್ಲಿ ಸಂಭವಿಸುತ್ತಲೇ ಇರುವ ಮಳೆ ಅನಾಹುತದಲ್ಲಿ ನೊಂದು ಬೆಂದವರ, ಪ್ರವಾಹದಲ್ಲಿ ಕೊಚ್ಚಿ ಹೋದವರ ಕುಟುಂಬಗಳ ಕಣ್ಣೀರು ಒರೆಸುವ ಯೋಗ್ಯತೆ ಇಲ್ಲದ ಸಚಿವ ಆರ್.ಅಶೋಕ್ ತಮಗೆ ಗೊತ್ತಿಲ್ಲದ, ಅರ್ಥವೂ ಆಗದ ಸಂಗತಿಗೆ ಮೂಗು ತೂರಿಸಿ ಬೈಠಕ್‍ನಲ್ಲಿ ಕಲಿತ ಸುಳ್ಳು ಮತ್ತು ಷಡ್ಯಂತ್ರದ ಮಾತುಗಳನ್ನೇ ಮಾಧ್ಯಮಗಳ ಎದುರು ಆಡಿದ್ದಾರೆ ಎಂದಿದ್ದಾರೆ.

ಓದಿ:ಮುಂದೆ ಇಂತಹ ಸಮಸ್ಯೆ ಆಗಲೇಬಾರದು ಅಂತ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ: ಆರ್​ ಅಶೋಕ್

ABOUT THE AUTHOR

...view details