ಬೆಂಗಳೂರು: ದಮ್, ತಾಕತ್ತು ಇದ್ದರೆ ಕಾಂಗ್ರೆಸ್ ಮೀಸಲಾತಿ ರದ್ದು ಮಾಡಲಿ ಎಂದು ಸಚಿವ ಆರ್ ಅಶೋಕ್ ಸವಾಲು ಹಾಕಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ತಾಕತ್ತು, ದಮ್ಮು, ಧೈರ್ಯ ಇದರೆ ಮೀಸಲಾತಿ ರದ್ದು ಮಾಡಲಿ ನೋಡೋಣ. ಕಾಂಗ್ರೆಸ್ ನವರು ತಮ್ಮ ಪ್ರಣಾಳಿಕೆಯಲ್ಲಿ ಅದನ್ನು ಹಾಕಲಿ. ಮೀಸಲಾತಿ ಕೊಟ್ಟಿರುವುದು ಸರಿ ಇಲ್ಲ ಎಂದು ಹಾಕಲಿ. ಆಗ ಜನರು ಸರಿಯಾದ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ನವರು ಹಿಂದೆ ಏಕೆ ಮೀಸಲಾತಿ ಹೆಚ್ಚಳ ಮಾಡಿಕೊಟ್ಟಿಲ್ಲ. ಒಳಮೀಸಲಾತಿ ಏಕೆ ಕೊಟ್ಟಿಲ್ಲ?. ಇವರಿಗೆ ಏನು ದಾಡಿ ಆಗಿತ್ತು. ಇಷ್ಟು ವರ್ಷ ಏನು ಮಣ್ಣು ತಿಂತಾ ಇದ್ರಾ. ಮೀಸಲಾತಿ ಹೆಚ್ಚಳ ಮಾಡಿದ್ದಕ್ಕೆ ಕಾಂಗ್ರೆಸ್ ಗೆ ಹೊಟ್ಟೆ ಉರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಡಿಕೆಶಿ ಕ್ಷಮೆಯಾಚಿಸಬೇಕು:ಲಿಂಗಾಯತ, ಒಕ್ಕಲಿಗ ಸ್ವಾಮೀಜಿಗಳಿಗೆ ಹೆದರಿಸಿ, ಬೆದರಿಸಿ ಮೀಸಲಾತಿಗೆ ಒಪ್ಪಿಸಲಾಗಿದೆ ಎಂಬ ಡಿಕೆಶಿ ಆರೋಪ ವಿಚಾರವಾಗಿ ಮಾತನಾಡಿ, ಡಿಕೆಶಿ ಸ್ವಾಮೀಜಿಗಳ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ಕೊಟ್ಟಿದ್ದಾರೆ. ಸ್ವಾಮೀಜಿಗಳು ಜ್ಞಾನಿಗಳು, ತಿಳಿದವರು. ಅವರ ಬಗ್ಗೆ ಹೀಗೆ ಮಾತಾಡಿದ್ದು ಸರಿಯಲ್ಲ. ಡಿಕೆಶಿ ತಮ್ಮ ಹೇಳಿಕೆ ವಾಪಸ್ ಪಡೆಯಲಿ. ಸ್ವಾಮೀಜಿಗಳ ಕ್ಷಮೆಯನ್ನು ಡಿಕೆಶಿ ಕೇಳಲಿ ಎಂದು ಆಗ್ರಹಿಸಿದರು.
ಹೆದರಿಸುವುದು, ಗದರಿಸುವುದು ಕಾಂಗ್ರೆಸ್ ಸಂಸ್ಕೃತಿ. ಅವರದ್ದು ಗೂಂಡಾ ರಾಜಕಾರಣ. ಡಿಕೆಶಿ, ಸಿದ್ದರಾಮಯ್ಯ ನವರಿಗೆ ಸ್ವಲ್ಪ ಜ್ಞಾನ ಕಡಿಮೆ ಅನ್ನಿಸುತ್ತೆ. ಸ್ವಾಮೀಜಿಗಳಿಗೆ ಒತ್ತಡ ಹಾಕಲು ಸಾಧ್ಯನಾ?. ನಿಜಕ್ಕೂ ಇದು ಅವಮಾನ ಮಾಡಿದಂಗೆ. ಕಾಂಗ್ರೆಸ್ ಸ್ವಾಮೀಜಿಗಳಿಗೆ ಅವಮಾನ ಮಾಡುತ್ತಿದ್ದಾರೆ. ಎಲ್ಲಾ ಸ್ವಾಮೀಜಿಗಳು ಮೀಸಲಾತಿ ಒಪ್ಪಿದ್ದಾರೆ. ರಾಜ್ಯದಲ್ಲಿ ಎಲ್ಲಾ ಸಂತೋಷವಾಗಿದ್ದಾರೆ ಎಂದರು.