ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾಧ್ಯಮಗೋಷ್ಟಿ ಬೆಂಗಳೂರು:''ಕಾಂಗ್ರೆಸ್ ಚಿತಾವಣಿಯಿಂದ 30 ವರ್ಷದ ಹಳೆಯ ಕೇಸ್ ರೀಓಪನ್ ಆಗಿದೆ. ಕೋರ್ಟ್ ವಜಾ ಮಾಡಿದ ಕೇಸ್ನಲ್ಲಿ ಹಿಂದೂ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ತಪ್ಪು ಮಾಡಿದ್ದಾರೆ'' ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ''ರಾಮ ಭಕ್ತರು ಅಯೋಧ್ಯೆಗೆ ತೆರಳಬಾರದು ಎನ್ನುವ ಕಾರಣಕ್ಕೆ ಭೀತಿ ಹುಟ್ಟಿಸಲು ಗೋಧ್ರಾ ಮಾದರಿ ಘಟನೆ ನಡೆಯಲಿದೆ ಎಂದು ಬಿ ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ'' ಎಂದ ಅವರು, ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತನ ಬಂಧನ ಮಾಡಿದ್ದು, ಇಡೀ ದೇಶಾದ್ಯಂತ ಸುದ್ದಿ ಆಗುತ್ತಿದೆ. ಸಿಎಂ ಸಿದ್ದರಾಮಯ್ಯನವರು, ಶ್ರೀಕಾಂತ್ ಪೂಜಾರಿ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸುವ ಕೆಲಸ ಆಗುತ್ತಿದೆ. ಅವರ ಮೇಲೆ ಹಲವು ಕೇಸ್ ಹಾಕಿದ್ದಾರೆ. ಆ ಠಾಣೆಯಲ್ಲಿ ದಾಖಲಾದ ಕೇಸ್ಗೆ ಆರೋಪಿ ಸಿಗದಿದ್ದರೆ ಇವರನ್ನು ಫಿಟ್ ಮಾಡಿದ್ದಾರೆ. ಅವರ ಕಾಲಿಗೆ ಪೆಟ್ಟಾಗಿದ್ದು, ದಿನಾ ಕ್ಲೀನ್ ಮಾಡಿ ಬ್ಯಾಂಡೇಜ್ ಕಟ್ಟಬೇಕು, ಅವರು ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದಾರೆ ಎಂದು ಹೇಳಿದರು.
''ಬೆಂಗಳೂರಿನಲ್ಲಿ ಸಾವಿರಾರು ಆರೋಪಿಗಳ ಮೇಲೆ ಕೇಸ್ ಬಾಕಿ ಇವೆ. ಅವರಿಗೆ ಟೀ ಕಾಫಿ ಕೊಟ್ಟು ಕಳುಹಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿಕೆಶಿ, ಶಶಿ ತರೂರ್ ಯಾವ ಕೇಸ್ನಲ್ಲಿ ಇದ್ದಾರೆ. ನಾಗೇಂದ್ರ ಗಣಿ ಕೇಸ್ನಲ್ಲಿ ಇದ್ದಾರೆ. ಡಿ ಕೆ ಶಿವಕುಮಾರ್ ಮೇಲೆ ಕೇಸ್ ಆದಾಗ 5,000 ಜನ ಸೇರಿ ಪ್ರತಿಭಟನೆ ಮಾಡಿದ್ರಿ. ನಿಮಗೊಂದು ಹಾಗೂ ಬಡವರಿಗೆ ಒಂದು ಕಾನೂನು ಇದೆಯಾ'' ಎಂದು ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದರು.
''ಅಯೋಧ್ಯೆ ರಾಮಮಂದಿರ ಕಾರ್ಯಕ್ರಮಕ್ಕೆ ವಿಘ್ನ ಮಾಡಬೇಕು ಅನ್ನೋದು ನಿಮ್ಮ ನಿಲುವು. ಗೋಧ್ರಾ ರೀತಿ ಆಗುತ್ತೆ ಅಂತ ಬಿ ಕೆ ಹರಿ ಪ್ರಸಾದ್ ಹೇಳಿದ್ದಾರೆ. ಇದು ಹಿಂದೂ ರಾಷ್ಟ್ರ. ಇದು ಪಾಕಿಸ್ತಾನ ಅಲ್ಲ. ಇರಾನ್, ಇರಾಕ್ ಮಾಡಲು ಬಿಡಲ್ಲ. ಮನೆ ಮನೆಯಲ್ಲಿ ದೀಪ ಬೆಳಗಿಸಬಾರದು ಅಂತ ಕುತಂತ್ರ ಮಾಡ್ತಿದ್ದಾರೆ. ಸಿದ್ದರಾಮಯ್ಯ ಕುತಂತ್ರ ರಾಜಕಾರಣ ಮಾಡ್ತಿದ್ದಾರೆ. ತಮ್ಮ ಹೆಸರಲ್ಲಿಯೇ ರಾಮ ಇದ್ದಾರೆ ಅಂತ ಹೇಳ್ತಾರೆ. ಮೊದಲು ನಿಮ್ಮೆ ಹೆಸರಿನಲ್ಲಿರುವ ರಾಮ ಎನ್ನುವ ಪದ ತೆಗಿಯಿರಿ'' ಎಂದು ಆರ್. ಆಶೋಕ್ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
''ಇದು ಕೊಲೆ ಪ್ರಕರಣ ಅಲ್ಲ, ಆರೋಪಿಗೆ ನೋಟಿಸ್ ಕೊಡಬೇಕಿತ್ತು, ಕಾಣೆಯಾಗಿರುವ ನೋಟಿಸ್ ನಿವಾಸಕ್ಕೆ ಅಂಟಿಸಬೇಕಿತ್ತು. ಕೋರ್ಟ್ಗೆ ರಜೆ ಇರುವುದನ್ನು ನೋಡಿ ಬಂಧಿಸಿದ್ದು ಯಾಕೆ? ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ ಪ್ರತಿ ಕೊಟ್ಟಿದ್ದೀರಾ? ಎಲ್ಲಿದೆ ಕಾಪಿ ತೋರಿಸಿ, ಕೊಟ್ಟರೆ ಬೇಲ್ ಮತ್ತಿತರ ಕಾನೂನು ಹೋರಾಟಕ್ಕೆ ಮುಂದಾಗಲಿದ್ದಾರೆ ಎಂದೇ ಎಫ್ಐಆರ್ ಪ್ರತಿಯನ್ನು ಕಾಣೆ ಮಾಡಿದ್ದಾರೆ. ಕೇಸ್ ಆದಾಕ್ಷಣ ಶ್ರೀಕಾಂತ್ ಪೂಜಾರಿ ಆರೋಪಿ ಮಾತ್ರ, ಅಪರಾಧಿ ಅಲ್ಲ. ಕೋರ್ಟ್ ಹೇಳಿದಾಗ ಮಾತ್ರ ಅಪರಾಧಿಯಾಗಿತ್ತಾರೆ. ರಾಹುಲ್ ಗಾಂಧಿಗೆ ಎರಡು ವರ್ಷ ಶಿಕ್ಷೆಯಾಗಿದೆ. ಹಾಗಾಗಿ ಅವರು ಅಪರಾಧಿ. ಶ್ರೀಕಾಂತ್ ಪೂಜಾರಿ ಅಪರಾಧಿಯಲ್ಲ'' ಎಂದು ಅಶೋಕ್ ಕಿಡಿಕಾರಿದರು.
''ಮನೆ ಮನೆಗೆ ಬಿಜೆಪಿ ಕಾರ್ಯಕರ್ತರು, ರಾಮಭಕ್ತರು ಮಂತ್ರಾಕ್ಷತೆ ತಲುಪಿಸುತ್ತಿದ್ದಾರೆ. ಆದರೆ, ಈಗ ರಾಮಮಂದಿರ ಉದ್ಘಾಟನೆಯ ಅಕ್ಷತೆ ಕೊಡಲು ಅನುಮತಿ ಪಡೆದಿದ್ದೀರಾ ಎಂದು ಪೊಲೀಸರು ಕೇಳುತ್ತಿದ್ದಾರೆ. ಡಿಕೆ ಶಿವಕುಮಾರ್ ಹೇಳಿಕೆ ನಂತರ ಪೊಲೀಸರು ಹೀಗಾಡುತ್ತಿದ್ದಾರೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ಮಾತ್ರ ರಾಜಕಾರಣ ಮಾಡುತ್ತಿದೆ: ಬಸವರಾಜ ಬೊಮ್ಮಾಯಿ