ಬೆಂಗಳೂರು: ಸರ್ಕಾರಿ ಶಾಲೆ ಹಾಗೂ ಆಟದ ಮೈದಾನಕ್ಕೆ ಬೆಂಗಳೂರು ಪೂರ್ವ ತಾಲೂಕು ಕೆ.ಆರ್.ಪುರ ಹೋಬಳಿಯ ಮಹದೇವಪುರ ಗ್ರಾಮದ ಸರ್ವೇ ನಂಬರ್ 199ರಲ್ಲಿ ಕಾಯ್ದಿರಿಸಿದ್ದ ಜಮೀನು ಒತ್ತುವರಿಯನ್ನು ತೆರವುಗೊಳಿಸಲಾಗುತ್ತದೆ. ಎಷ್ಟೇ ಪ್ರಭಾವಿಗಳಿದ್ದರೂ ಮಣಿಯದೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನ ಪರಿಷತ್ನ ಕಲಾಪ ವೇಳೆ ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರಂ ವಾರ್ಡ್ 81ರ ಸರ್ವೇ ನಂಬರ್ 199ರ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣಸ್ವಾಮಿ, ಕಂದಾಯ ಸಚಿವ ಆರ್.ಅಶೋಕ್ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಸಚಿವ ಅಶೋಕ್, ಸರ್ವೇ ನಂಬರ್ 199ರಲ್ಲಿ 7 ಎಕರೆ ಖರಾಜು ಬಂಡೆ ಜಮೀನಿದ್ದು, ಅದರಲ್ಲಿ 2 ಎಕರೆ ಜಾಗದಲ್ಲಿ 100 ಮನೆಗಳಿವೆ. ಈ ಒತ್ತುವರಿ ಇಂದು ನಿನ್ನೆಯದಲ್ಲ. 30-40 ವರ್ಷದಿಂದ ಇದೆ. ಹೆಚ್ಚುವರಿ 10 ಮನೆ ಕಟ್ಟಿದ್ದಾರೆ ಅವುಗಳ ತೆರವಿಗೆ ಒತ್ತಾಯಿಸಿದ್ದಾರೆ. ಆದರೆ ನಾವು ಏಕಾಏಕಿ ಡೆಮಾಲಿಷ್ ಮಾಡುವಂತಿಲ್ಲ. ಕಾನೂನು ಪ್ರಕಾರ ನೋಟಿಸ್ ನೀಡಿ, ಸರ್ವೇ ಮಾಡಿ ನಂತರ ತೆರವು ಮಾಡಬೇಕಾಗುತ್ತದೆ. ಯಾರೇ ಒತ್ತುವರಿ ಮಾಡಿರಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.