ಬೆಂಗಳೂರು:ಕಾಂಗ್ರೆಸ್ ಸರ್ಕಾರ ಬಂದ ನಂತರ ಮತ್ತೆ ಕರ್ನಾಟಕದಲ್ಲಿ ಟಿಪ್ಪು ಯುಗ ಆರಂಭಿಸಲು ಶಂಕುಸ್ಥಾಪನೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಮತಾಂತರದ ಬ್ರಾಂಡ್ ಅಂಬಾಸಿಡರ್ ಆಗಲು ಹೊರಟಿದೆ. ಅಂಬೇಡ್ಕರ್ ಕೂಡ ಸಂವಿಧಾನದಲ್ಲಿ ಮತಾಂತರದ ಬಗ್ಗೆ ಬರೆದಿದ್ದಾರೆ. ಆದರೂ ಅನೇಕರ ಓಲೈಕೆಗೆ ಇದನ್ನ ಮಾಡುತ್ತಿದ್ದಾರೆ. ಮತಾಂತರ ಕಾಯ್ದೆ ವಾಪಸ್ ಪಡೆದಿದ್ದಲ್ಲಿ ದೊಡ್ಡ ಹೋರಾಟ ಮಾಡಲಿದ್ದೇವೆ. ಮತಾಂತರದಿಂದ ಕರ್ನಾಟಕ ಉಳಿಸಿ ಅಭಿಯಾನ ಮಾಡಲಿದ್ದೇವೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾಮೀಜಿಗಳೂ ಕೂಡ ಮತಾಂತರ ಆಗೋದನ್ನ ತಡೆಯಬೇಕು ಅಂತಾ ಹೇಳಿದ್ದಾರೆ. 40 ಲಕ್ಷ ಜನ ಹಿಂದೂಗಳು ಮತಾಂತರ ಆಗಿದ್ದಾರೆ. ಲವ್, ಆಸ್ಪತ್ರೆ, ಹಣದ ಆಮಿಷಕ್ಕೆ ಹಿಂದೂಗಳು ಮತಾಂತರ ಆಗಿದ್ದಾರೆ. ನಾವು ಮಾಡಿದ ಕಾಯ್ದೆಯಲ್ಲಿ ಬಲವಂತವಾಗಿ ಮತಾಂತರ ಆಗಬಾರದು ಅಂತ ಹೇಳಿದ್ದಾರೆ, ಹೊರತು ಸ್ವಯಂ ಪ್ರೇರಿತ ಮತಾಂತರಕ್ಕೆ ನಿರ್ಬಂಧ ವಿಧಿಸಿಲ್ಲ. ಅಂಬೇಡ್ಕರ್ ಕೂಡ ಸಂವಿಧಾನದಲ್ಲಿ ಮತಾಂತರದ ಬಗ್ಗೆ ಬರೆದಿದ್ದಾರೆ. ಅದರಂತೆ ಬಲವಂತವಾಗಿ, ಉದ್ಯೋಗ, ಆಮಿಷಗಳಿಗೆ ಮತಾಂತರ ಆಗಬಾರದು ಅಂತ ಹೇಳಿದ್ದೇವೆ. ಇದರಲ್ಲಿ ತಪ್ಪೇನು?. ಮತಾಂತರ ಆಗಬೇಕಾದವರು ಅರ್ಜಿ ಹಾಕಿ ಕಾನೂನು ಪ್ರಕಾರ ಆಗಬೇಕು. ಬಾಬರ್ ಹಿಂದೆ ಮತಾಂತರ ಮಾಡಲು ಹೊರಟಿದ್ದ. ಟಿಪ್ಪು ಕೊಡಗಿನಲ್ಲಿ 50-60 ಸಾವಿರ ಕೊಡವರ ಮತಾಂತರ ಮಾಡಿದ್ದಾರೆ. ಟಿಪ್ಪುವಿನ ಸಿದ್ದಾಂತ ಏನಿದೆಯೋ ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಸರ್ಕಾರ ಹೊರಟಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ಸರ್ಕಾರದ ವಿರುದ್ಧ ಬೃಹತ್ ಹೋರಾಟ:ಬಿಜೆಪಿ ಮತಾಂತರ ಕಾಯ್ದೆ ವಾಪಸ್ ಪಡೆಯದಂತೆ ಆಗ್ರಹಿಸುತ್ತದೆ. ಮುಂದಿನ ದಿನದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದಲ್ಲಿ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಮಾಡಲಿದ್ದೇವೆ. ಅನೇಕರ ಓಲೈಕೆಗಾಗಿ ಕಾಂಗ್ರೆಸ್ ನವರು ಇದನ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಮತಾಂತರ ಆಗಬಾರದು ಅಂತ ಸಹಿ ಹಾಕಿದ್ದರು. ಈಗ ಏಕಾಏಕಿ ಬದಲಾವಣೆ ಆಗಿದ್ದಾರೆ. ಕಾಂಗ್ರೆಸ್ ನವರು ಓಟಿಗಾಗಿ ಏಕಾಏಕಿ ಹೇಗೆ ಬೇಕಾದರೂ ಬದಲಾಗಲಿದ್ದಾರೆ ಎಂದು ಟೀಕಿಸಿದರು.
ಮಿನಿ ಪಾಕಿಸ್ತಾನ ಮಾಡಲು ಹೊರಟಂತಿದೆ: ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನ ಮಿನಿ ಪಾಕಿಸ್ತಾನ ಮಾಡಲು ಹೊರಟಂತಿದೆ. ನಾವು ಕಾಯ್ದೆ ತಂದಾಗ ಯಾರಾದರೂ ಒಬ್ಬ ಮಠಾಧೀಶರಾದರೂ ವಿರೋಧ ಮಾಡಿದ್ದಾರಾ?. ನಾವು ಕಾಯ್ದೆ ತಂದಾಗ ಕೆಎಫ್ಡಿ, ಪಿಎಫ್ಐನವರು ವಿರೋಧ ಮಾಡಿದ್ದರು. ಹಾಗಾದರೆ ನೀವು ಅವರ ಪರವಾಗಿದ್ದೀರಾ.? ಎಂದು ಅಶೋಕ್ ಪ್ರಶ್ನಿಸಿದರು.
ಕಾಂಗ್ರೆಸ್ ದಲ್ಲಾಳಿಗಳ ಪರವಾಗಿ ನಿಂತಿದೆ ?: ರೈತರು ಬೆಳೆದ ಉತ್ಪನ್ನ ಮಾರಾಟಕ್ಕೆ ಎಪಿಎಂಸಿ ಕಾಯ್ದೆ ತಂದಿದ್ದರೂ ದಲ್ಲಾಳಿಗಳು ಹೇಳಿದ ಬೆಲೆಗೆ ಬೆಳಗಳು ,ಧಾನ್ಯಗಳ ಕೊಡಬೇಕಿತ್ತು. ಮೊದಲೇ ರೇಟ್ ಫಿಕ್ಸ್ ಮಾಡಲಾಗುತ್ತಿತ್ತು. ಆದರೆ ನಾವು ತಂದ ಕಾಯ್ದೆಯಿಂದಾಗಿ ರೈತರು ಆನ್ ಲೈನ್‌ನಲ್ಲಿ ಕೃಷಿ ಉತ್ಪನ್ನ ಮಾರಬಹುದಿತ್ತು. ಹೊರ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಮಾರಲು ಅವಕಾಶ ಇದೆ. ಹೊಸ ಕಾಯ್ದೆಯಿಂದ ಎಳನೀರು ದೊಡ್ಡ ಬೆಲೆಗೆ ಸಿಗುತ್ತಿತ್ತು. ಇದು ದಲ್ಲಾಳಿ ಇಲ್ಲದೇ ರೈತರಿಗೆ ಅನುಕೂಲ ಆಗುತ್ತಿತ್ತು. ಹಾಗಾಗಿ ಈ ಕಾಯ್ದೆ ಪರಾಮರ್ಶೆ ಮಾಡೋದಕ್ಕೆ ನಮ್ಮವಿರೋಧ ಇದೆ. ಎಪಿಎಂಸಿಗಳಲ್ಲಿ ತಕ್ಕಡಿಯ ತೂಕದಲ್ಲಿ ಮೋಸ ಅಂತ ನೀವೇ ಬರೆದಿದ್ದೀರಿ. ದಲ್ಲಾಳಿಗಳ ಪರವಾಗಿ ಕಾಂಗ್ರೆಸ್ ನಿಂತಿದೆ ಎಂದು ಅಶೋಕ್ ಆರೋಪಿಸಿದರು.
ಪಠ್ಯಪುಸ್ತಕ ಕೂಡ ಹಾಗೆ ಮಾಡಿದ್ದಾರೆ. ಹೆಡ್ಗೆವಾರ್ ಸೇರಿದಂತೆ ಅನೇಕ ಪಠ್ಯ ತೆಗೆಯುವ ಪ್ರಯತ್ನ ಮಾಡಿದ್ದಾರೆ. ನಿಮ್ಮ ಸರ್ಕಾರ ಬಂದಿದೆ ಬದಲಾವಣೆ ಮಾಡಿ. ಆದರೆ ಜನರ ಅಭಿಪ್ರಾಯ ಕೇಳಿ. ಜನರ ಮನಸ್ಸಿಗೆ ಕೆಟ್ಟ ಅಭಿಪ್ರಾಯ ತರುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.
ಕರೆಂಟ್ ಬಿಲ್ ಬಗ್ಗೆ ಬಹಳ ವಿರೋಧ ಇದೆ. ಕಾಂಗ್ರೆಸ್ ಕೊಡೋದ್ರಲ್ಲಿ ಚೌಕಾಸಿ ಮಾಡುತ್ತಿದೆ. ಉಚಿತವಾಗಿ ಕೊಟ್ಟಂಗೂ ಆಗಬೇಕು, ಕೊಡದಂಗೂ ಆಗಬೇಕು. ಎಲ್ಲರಿಗೂ ಉಚಿತ ಅಂತ ಹೇಳಿದ್ದರು. ಈಗ ಷರತ್ತು ಅಂತ ಹೇಳುತ್ತಿದ್ದಾರೆ. ಚೆಕ್ಕಿಗೆ ಸೈನ್ ಹಾಕಿದಾಗ ಷರತ್ತು ಹಾಕಬೇಕಿತ್ತು. ಈಗ ಚೆಕ್‌ಬೌನ್ಸ್ ಆದಂತಾಗಿದೆ. ಹೊಸ ಮನೆ ಕಟ್ಟುವವರಿಗೆ ಮೀಟರ್ ಡೆಪಾಸಿಟ್ ಹೆಚ್ಚಳ ಮಾಡಲಾಗಿದೆ. ಜನರಿಗೆ ಗೊಂದಲ ಮಾಡಿದ್ದಾರೆ. ಜತೆಗೆ 70 ಪೈಸೆ ಏರಿಕೆ ಮಾಡಲಾಗಿದೆ. ಅದಕ್ಕೆ ಬಿಜೆಪಿ ಕಾರಣ ಅಂತ ಹೇಳ್ತಾರೆ. 12ಕ್ಕೆ ಬಿಜೆಪಿ ಸರ್ಕಾರ ಇತ್ತಾ.? ಮಹದೇವಪ್ಪ, ರಾಮಲಿಂಗಾ ರೆಡ್ಡಿ ಬಿಜೆಪಿಯ ಎಲ್ಲಾ ಯೋಜನೆ ಸ್ಟಾಪ್ ಎಂದರು. ಡಿ.ಕೆ ಶಿವಕುಮಾರ್ ಕೂಡ ಅದನ್ನೇ ಹೇಳಿದ್ದರು. ಕರೆಂಟ್ ಬಿಲ್ ಹೆಚ್ಚಳ ಯಾಕೆ ಸ್ಟಾಪ್ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.