ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ ಕಾಣಿಕೆ. ಬರದಿಂದ ಬೇಸತ್ತ ರೈತರಿಗೆ ನೇಣಿನ ಕುಣಿಕೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಕಾಲೋನಿಗೆ ಹೆಚ್ಚಿನ ಅನುದಾನ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಬರದಿಂದ ಸುಮಾರು 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಹತ್ತು ಸಾವಿರ ಕೋಟಿ ಕೊಡ್ತೇವೆ ಅಂದಿದ್ರು. ಈಗ ಒಂದು ಸಾವಿರ ಕೊಡೋದಾಗಿ ಹೇಳಿದ್ದಾರೆ. ಒಟ್ಟು ಹನ್ನೊಂದು ಸಾವಿರ ಕೋಟಿ ರೂ. ಹಿಂದುಗಳ ಮತ್ತು ದಲಿತರ ಕಾಲೋನಿ ಅಭಿವೃದ್ಧಿ ಬೇಡ್ವಾ ಹಾಗಿದ್ರೆ?. ಟಿಪ್ಪು, ತುಘಲಕ್ ಸಂಸ್ಕೃತಿಯ ಆಳ್ವಿಕೆ ಸಿದ್ದರಾಮಯ್ಯರದ್ದು. ವೋಟಿನ ವೋಲೈಕೆಗಾಗಿ ಹೀಗೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಕಳೆದ ಏಳು ತಿಂಗಳಿನಿಂದ ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿಲ್ಲ. ಈ ಹಿಂದೆ ಪಿಎಫ್ಐ ಕೇಸ್ ವಾಪಸ್ ಪಡೆದಿದ್ರು. ಡಿಜೆ ಹಳ್ಳಿ, ಕೆಜಿ ಹಳ್ಳಿಯ ಕೇಸ್ ವಾಪಸ್ ಪಡೆಯಲು ಫೈಲ್ ಮೂವ್ ಮಾಡಿದ್ದಾರೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದು ಅವರೆಲ್ಲ ಬ್ರದರ್ ಅಂತ. ಇದೆಲ್ಲ ವೋಲೈಕೆಗಾಗಿ ಮಾಡ್ತಿರೋದು. ರೈತರಿಗೆ ಸುಮಾರು 30 ಸಾವಿರ ರೂ. ನಷ್ಟು ಪರಿಹಾರ ಹಣ ಕೊಡಬೇಕು. ವಿಪಕ್ಷಗಳು ಅಧಿವೇಶನದಲ್ಲಿ ಪ್ರಶ್ನೆ ಮಾಡ್ತಾರೆ ಎಂದು 2 ಸಾವಿರ ಕೊಡೋದಾಗಿ ಘೋಷಣೆ ಮಾಡಿದ್ರು. ಇವರ ಯೋಗ್ಯತೆಗೆ ಇದುವರೆಗೂ ಹಣ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅಲ್ಪಸಂಖ್ಯಾತ ಕಾಲೋನಿ ಎಂದು ಪ್ರತ್ಯೇಕವಾಗಿ ಹಣ ಘೋಷಣೆ ಮಾಡಿ ಸಮಾಜ ಒಡೆಯಲಾಗಿದೆ. ಮುಸ್ಲಿಂರನ್ನು ಪ್ರತ್ಯೇಕ ಮಾಡುವ ಹುನ್ನಾರ ಇದು. ಈ ಹಿಂದೆ ಟಿಪ್ಪು ಆಳ್ವಿಕೆಯಲ್ಲಿ ಪ್ರತ್ಯೇಕ ಮಾಡಲಾಗ್ತಿತ್ತು. ಇದನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ಕಾಣ್ತಿದ್ದೇವೆ. ವೋಲೈಕೆಗಾಗಿ ಹೀಗೆ ಮಾಡಲಾಗ್ತಿದೆ ಎಂದು ಅಶೋಕ್ ಆರೋಪಿಸಿದರು.