ಬೆಂಗಳೂರು: ಕಾರ್ಯಭಾರದಿಂದಾಗಿ ಮಂಡ್ಯಕ್ಕೆ ಸಮಯ ನೀಡಲಾಗುತ್ತಿಲ್ಲ. ಹಾಗಾಗಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಿಂದ ವಿಮುಕ್ತಗೊಳಿಸಿ ಎಂದು ಕಂದಾಯ ಸಚಿವ ಆರ್.ಅಶೋಕ್ ಪತ್ರದ ಮೂಲಕ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅವರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿಯಿಂದ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಅಶೋಕ್ ಪತ್ರ ಬರೆದು ಈಗಾಗಲೇ ದಾವಣಗೆರೆಯಲ್ಲಿ ಹಕ್ಕು ಪತ್ರ ನೀಡುವ ಕೆಲಸ, ಗ್ರಾಮ ವಾಸ್ತವ್ಯ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಮುಂತಾದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಅವರು ಮಂಡ್ಯ ಜಿಲ್ಲೆಯ ಉಸ್ತುವಾರಿಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಹೀಗಾಗಿ ಉಸ್ತುವಾರಿಯಿಂದ ಅವರನ್ನು ಕೈಬಿಡಲಾಗಿದೆ ಎಂದರು.
ಇದೇ ವೇಳೆ, ಸರ್ಕಾರದ ಯೋಜನೆಗಳು ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳಿಗೆ ಮುಟ್ಟಬೇಕೆಂಬ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ಮೇಲೆ ಬಹಳಷ್ಟು ಪಾರದರ್ಶಕತೆ ಸಾಧ್ಯವಾಗಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಫಲಾನುಭವಿಗಳಿಗೆ ನೇರವಾಗಿ ಮುಟ್ಟಿಸಲು ಡಿಬಿಟಿ ವ್ಯವಸ್ಥೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದ್ದು, ಜನರು ಕಚೇರಿಗಳಿಗೆ ಒಡಾಡುವುದನ್ನು ತಪ್ಪಿಸಲಾಗಿದೆ. ಪಿಎಂ ಸ್ವನಿಧಿ, ರೈತ ವಿದ್ಯಾ ನಿಧಿ, ರೈತ ಶಕ್ತಿ ಯೋಜನೆಗಳು ಡಿಬಿಟಿ ಮುಖಾಂತರವಾಗಿ ಪಾವತಿಯಾಗುತ್ತಿದೆ. ಈ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಫಲಾನುಭವಿಗಳಿಗೆ ನೇರವಾಗಿ ಮುಟ್ಟಲು ಹಾಗೂ ಸೌಲಭ್ಯ ವಂಚಿತರಾದವರಿಗೆ ಕಾರ್ಯಕ್ರಮ ಮುಟ್ಟಿಸಲು ಕೂಡಲೇ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸ್ತ್ರೀ ಶಕ್ತಿ, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ, ಅಮೃತ ಯೋಜನೆಗಳನ್ನು ಜಾರಿಗೆ ತರಬೇಕಿದ್ದು, ಇದಕ್ಕೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಬಾಕಿ ಇರುವ ಫಲಾನುಭವಿಗಳನ್ನು ಗುರುತಿಸಿ ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸವಾಗಬೇಕು. ಪ್ರತಿ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನ ಕೈಗೊಂಡು ಒಂದು ಸಮ್ಮೇಳನ ಮಾಡುವ ಮುಖಾಂತರ ಯೋಜನೆಗಳನ್ನು ಮುಟ್ಟಿಸಲಾಗುವುದು. ಇದರಿಂದ ಅತ್ಯಂತ ತಳಸ್ತರದಲ್ಲಿರುವ ಜನರಿಗೆ ಮಾಹಿತಿ ತಲುಪಿದಂತಾಗುತ್ತದೆ ಎಂದು ಸಿಎಂ ಹೇಳಿದರು.