ಬೆಂಗಳೂರು: ರಾಜ್ಯದಲ್ಲಿರುವ ರೈತರಿಗೆ ತಮ್ಮ ಜೀವ ಉಳಿಸಿಕೊಳ್ಳಲು ಈಗ ಊರು ಬಿಡುವುದೊಂದೇ ದಾರಿ ಎಂಬ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ತಂದಿಟ್ಟಿದೆ. ಜನರಿಗೆ ಗ್ಯಾರಂಟಿ ಭಾಗ್ಯ ನೀಡಿದಂತೆ ಕೃಷಿ ಕಾರ್ಮಿಕರಿಗೆ ಗುಳೆ ಗ್ಯಾರೆಂಟಿ ಭಾಗ್ಯ ಕರುಣಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಎಕ್ಸ್ ಪೋಸ್ಟ್‌ನಲ್ಲಿ, ಗುಳೆ ತಪ್ಪಿಸಿ ರೈತರ ನೆರವಿಗೆ ಧಾವಿಸಿ ಇಲ್ಲವೇ ಖುರ್ಚಿ ಖಾಲಿ ಮಾಡಿ ಎಂದು ಆಗ್ರಹಿಸಿರುವ ಅವರು, ಸದಾ ಬಣ ರಾಜಕೀಯದಲ್ಲಿ ನಿರತವಾಗಿರುವ ಕಾಂಗ್ರೆಸ್ ಮಂತ್ರಿಗಳು ಹಾಗೂ ಶಾಸಕರು, ಎಷ್ಟು ಜನ ಡಿಸಿಎಂಗಳು ಇರಬೇಕು ಎಂದು ಲೆಕ್ಕಾಚಾರ ಹಾಕುವ ಬದಲು ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಏನು ಮಾಡಬೇಕು ಎಂದು ಯೋಚಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.
ಪಂಚ ರಾಜ್ಯಗಳ ಚುನಾವಣೆಗೆ ಕಲೆಕ್ಷನ್ ಮಾಡುವಲ್ಲಿ ಇರುವ ಆಸಕ್ತಿ, ತೆಲಂಗಾಣ ಚುನಾವಣೆಗೆ ಪ್ರಚಾರ ಮಾಡುವಲ್ಲಿ ಇರುವ ಉತ್ಸಾಹದಲ್ಲಿ ಕೊಂಚವಾದರೂ ರಾಜ್ಯದ ರೈತರ ಬಗ್ಗೆ ಇದ್ದಿದ್ದರೆ, ಕೃಷಿ ಕಾರ್ಮಿಕರು ಇಂದು ಮನೆ ಮಠ ಬಿಟ್ಟು ಗುಳೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಿಡಿ ಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ನಿಮ್ಮಲ್ಲಿ ನಿಜಕ್ಕೂ ಮಾನವೀಯತೆ ಇದ್ದರೆ, ರಾಜ್ಯದ ಕೃಷಿ ಕಾರ್ಮಿಕರು, ದಲಿತರು, ಪರಿಶಿಷ್ಟ ಪಂಗಡದವರು, ಹಿಂದುಳಿದವರ ಮೇಲೆ ಕಾಳಜಿ ಇದ್ದರೆ ಮೊದಲು ರಾಜ್ಯದ ಜನತೆ ಗುಳೆ ಹೋಗುವುದನ್ನು ತಪ್ಪಿಸಿ.ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುವುದೇ ನಿಮ್ಮ ಸಾಧನೆಯಾಗಿಬಿಟ್ಟಿದೆ. ರೈತರ ನೆರವಿಗೆ ಬರಲು ನಿಮ್ಮ ಕೈಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಒತ್ತಾಯಿಸಿದ್ದಾರೆ.
ಚುನಾವಣೆಗೂ ಮುಂಚೆ ವೋಟ್ಗಾಗಿ ಗ್ಯಾರೆಂಟಿ ಘೋಷಿಸಿದರು. ಈಗ ಅವುಗಳಿಗೆ ಹಣ ಬಳಸಿ ರಸ್ತೆ ಅಭಿವೃದ್ಧಿ, ಆಸ್ಪತ್ರೆ, ಶಾಲೆಗಳು ಮತ್ತು ರೈತರಿಗೆ ಕೊಡೋಕೆ ಇವರ ಬಳಿ ಹಣವಿಲ್ಲ. ಆದರೆ ಅಲ್ಪಸಂಖ್ಯಾತರಿಗೆ ಮಾತ್ರ ಕೋಟಿ ಕೋಟಿ ಹಣ ಕೊಡ್ತೀನಿ ಅಂತ ಹೇಳ್ತಾರೆ. ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದೆ. ತೀವ್ರ ಬರ ಪರಿಸ್ಥಿತಿಯಿಂದ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಣಮೇವು, ಹಸಿ ಮೇವಿನ ಅಭಾವ ಉಂಟಾಗಿದೆ. ಆದರೂ ರಾಜ್ಯದ ಯಾವ ಭಾಗದಲ್ಲಿಯೂ ಗೋಶಾಲೆ ತೆರೆದಿಲ್ಲ ಎಂದು ಅಪಾದಿಸಿದ್ದಾರೆ.
ಇದನ್ನೂಓದಿ:'ದೇವೇಗೌಡರ ಬೆನ್ನಿಗಿರಿದ ಬ್ರೂಟಸ್': ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಟೀಕಾಪ್ರಹಾರ