ಬೆಂಗಳೂರು:ವಿಧಾನಸಭೆ ಪ್ರತಿಪಕ್ಷ ನಾಯಕರನ್ನಾಗಿ ಪಕ್ಷದ ಹಿರಿಯ ಶಾಸಕ ಆರ್ ಅಶೋಕ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷವು ಸರ್ವಾನುಮತದಿಂದ ಆಯ್ಕೆ ಮಾಡಿದೆ. ಕೇಂದ್ರದಿಂದ ಬಂದಿದ್ದ ವೀಕ್ಷಕರ ಸಮ್ಮುಖದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ನಾಯಕನ ಆಯ್ಕೆ ನಡೆದಿದೆ. ವಿಧಾನಪರಿಷತ್ ಪ್ರತಿಪಕ್ಷ ನಾಯಕರ ಆಯ್ಕೆಯನ್ನು ಮುಂದೂಡಿಕೆ ಮಾಡಲಾಗಿದೆ.
ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್ನಲ್ಲಿ ನಡೆದ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಶಾಸಕರ ಅಭಿಪ್ರಾಯ ಆಲಿಸಿದ ನಂತರ ಕೇಂದ್ರದಿಂದ ವೀಕ್ಷಕರಾಗಿ ಬಂದಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಶೋಕ್ ಹೆಸರನ್ನು ಪ್ರಕಟಿಸಿದರು. ಶಾಸಕಾಂಗ ಪಕ್ಷದ ಸಭೆ ಈ ಹೆಸರಿಗೆ ಸರ್ವಾನುಮತದಿಂದ ಅಂಗೀಕಾರ ನೀಡಿತು. ನಂತರ ನೂತನ ಶಾಸಕಾಂಗ ಪಕ್ಷದ ನಾಯಕ ಅಶೋಕ್ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿ, ಗೌರವಿಸಲಾಯಿತು. ಹಿರಿಯ ನಾಯಕ ಯಡಿಯೂರಪ್ಪ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್. ಅಶೋಕ್ಗೆ ಶುಭ ಕೋರಿದರು.
ಇಂದು ಕೇವಲ ವಿಧಾನಸಭೆ ಪ್ರತಿಪಕ್ಷ ನಾಯಕರ ಆಯ್ಕೆ ನಡೆಸಿದ್ದು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರ ಆಯ್ಕೆಯನ್ನು ಮುಂದೂಡಲಾಗಿದೆ. ಯಾವುದೇ ನಿರ್ಧಾರ ಪ್ರಕಟಿಸಲಿಲ್ಲ, ಕೋಟಾ ಶ್ರೀನಿವಾಸ ಪೂಜಾರಿ, ಛಲವಾದಿ ನಾರಾಯಣಸ್ವಾಮಿ ಹೆಸರು ಕೇಳಿಬಂದಿದ್ದು, ಶಶಿಲ್ ನಮೋಶಿ ಕೂಡ ಅವಕಾಶಕ್ಕೆ ಬೇಡಿಕೆ ಇಟ್ಟಿದ್ದಾರೆ. ಸದ್ಯಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ತಾತ್ಕಾಲಿಕವಾಗಿ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿದೆ. ರಾಜ್ಯ ಘಟಕವೇ ಈ ಆಯ್ಕೆ ಪ್ರಕ್ರಿಯೆ ನಡೆಸಲಿ ಎಂದು ಹೈಕಮಾಂಡ್ನಿಂದ ಸಂದೇಶ ಕಳಿಸಲಾಗಿದೆ ಎನ್ನಲಾಗಿದೆ.
ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅಷ್ಟರ ಒಳಗೆ ಪರಿಷತ್ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಸಭೆಗೆ ಕೆಲ ನಾಯಕರು ಗೈರು:ಅಸಮಾಧಾನಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿದರಾದರೂ ಕೆಲವೇ ಸಮಯದಲ್ಲಿ ನಿರ್ಗಮಿಸಿದರು. ಅವರ ಜೊತೆ ರಮೇಶ್ ಜಾರಕಿಹೊಳಿ ಕೂಡ ನಿರ್ಗಮಿಸಿದರು. ಆದರೆ ಈ ಇಬ್ಬರು ನಾಯಕರು ಶಾಸಕಾಂಗ ಪಕ್ಷದ ಸಭೆಯ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ನಿರ್ಗಮಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಶಾಸಕ ಎಸ್.ಟಿ ಸೋಮಶೇಖರ್ ದೆಹಲಿಗೆ ತೆರಳಿದ್ದು ನಿನ್ನೆಯೇ ಈ ಬಗ್ಗೆ ಮಾಹಿತಿ ನೀಡಿದ್ದರು, ಬಾಲಚಂದ್ರ ಜಾರಕಿಹೊಳಿ ಅನಾರೋಗ್ಯದ ಕಾರಣದಿಂದಾಗಿ ಮಾಹಿತಿ ನೀಡಿ ಗೈರಾಗಿದ್ದಾರೆ. ಶಾಸಕ ಶಿವರಾಮ್ ಹೆಬ್ಬಾರ್ ಮಾತ್ರ ನಿಗೂಢ ರೀತಿಯಲ್ಲಿ ದೂರ ಉಳಿದಿದ್ದರು.