ಬೆಂಗಳೂರು: ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣದ ಬಗ್ಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಕುರಿತು ಸಚಿವ ಆರ್. ಅಶೋಕ್ ಮಾತನಾಡಿದ್ದು, ಗಲಭೆಗೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮಗಳನ್ನ ಈಗಾಗಲೇ ನಾವು ತೆಗೆದುಕೊಂಡಿದ್ದೇವೆ. ತಪ್ಪಿತಸ್ಥ ಎಲ್ಲರನ್ನೂ ವಶಕ್ಕೆ ಪಡೆದಿದ್ದು, ಇನ್ನೂ ಕೆಲವರು ಇದ್ದಾರೆ ಅವರನ್ನೂ ಸಹ ಮಟ್ಟಹಾಕುತ್ತೇವೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಇನ್ನು ಯಾರ ಯಾರನ್ನು ಕ್ವಾರಂಟೈನ್ನಲ್ಲಿ ಇಡಬೇಕೋ ಅವರನ್ನೆಲ್ಲಾ ಕ್ವಾರಂಟೈನ್ಗೆ ಒಳಪಡಿಸ್ತೀವಿ. ಎಷ್ಟೇ ಪ್ರಭಾವಿಗಳಿದ್ರೂ ನಾವು ಅವರನ್ನು ನಾವು ಬಿಡಲ್ಲ. ಈಗ ಇರುವುದು ವಿಶೇಷ ಕಾನೂನು. ಕಂದಾಯ ಇಲಾಖೆಯಿಂದ ಪೊಲೀಸರಿಗೆ ಪೂರ್ತಿ ಅಧಿಕಾರ ಕೊಟ್ಟಿದ್ದೇವೆ. ಸಿಎಂ ಬಿಎಸ್ವೈ ಹಾಗೂ ಕಾನೂನು ಸಚಿವರ ಜೊತೆ ಚರ್ಚೆ ಮಾಡಿ, ಕೇರಳ ಮಾದರಿಯಲ್ಲಿ ಕಾನೂನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದರು.
ಇನ್ನು, ಸೀಲ್ಡೌನ್ ಆಗಿರುವ ಪ್ರದೇಶದ ಪ್ರತಿ ಕೂಲಿ ಕಾರ್ಮಿಕರಿಗೆ ಒಂದು ಲಕ್ಷ ಕಿಟ್ ವಿತರಣೆ ಮಾಡಿದ್ದೇವೆ. ಇನ್ಫೋಸಿಸ್ ಅವರು 25 ಸಾವಿರ ಕಿಟ್ ಕೊಟ್ಟಿದ್ದಾರೆ. ಕಾರ್ಮಿಕ ಇಲಾಖೆಯಿಂದ ಕಿಟ್ ಕೊಡ್ತಿದ್ದೇವೆ ಎಂದರು. ಇನ್ನು ಸರ್ಕಾರ ಇನ್ನೊಂದು ಕಂತಿನಲ್ಲಿ ರೇಷನ್ ಕಿಟ್ ಕೊಡುತ್ತದೆ. ಎರಡು ತಿಂಗಳ ಅಕ್ಕಿಯನ್ನು ಈಗಾಗಲೇ ಕೊಟ್ಟಿದ್ದೇವೆ. ಎಲ್ಲರಿಗೂ ಬ್ಯಾಂಕ್ ಮೂಲಕ ಪೆನ್ಶನ್ ಕೊಡ್ತಿದ್ದೇವೆ. ಅಂಚೆ ಕಚೇರಿಯಿಂದ ಸ್ವಲ್ಪ ತಡವಾಗಿದೆ ಎಂದರು. ಯಾವ ಕಾರ್ಮಿಕನೂ ಹಸಿವಿನಿಂದ ನರಳಬಾರದು ಇದು ನಮ್ಮ ಸರ್ಕಾರದ ಗುರಿ. ಎಷ್ಟೇ ಖರ್ಚಾದರೂ ಸರಿ, ಎಲ್ಲರಿಗೂ ಊಟ ಕೊಡ್ತೀವಿ ಎಂದು ಸಚಿವ ಆರ್ ಅಶೋಕ್ ಹೇಳಿದ್ರು.
ಸಚಿವ ಆರ್. ಅಶೋಕ್ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು..? ಪಾದರಾಯನಪುರ ಘಟನೆ ಖಂಡನೀಯ: ಸಂಸದ ತೇಜಸ್ವಿ
ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಪಾದರಾಯನಪುರದಲ್ಲಿ ಆಗಿರುವ ಘಟನೆ ಖಂಡನೀಯ. ದೆಹಲಿಯ ತಬ್ಲಿಘಿ ಮರ್ಕಜ್ನಿಂದ ಬಂದಿರೋ ಜನ ಆ ಪ್ರದೇಶದಲ್ಲಿದ್ದಾರೆ. ಅವರಿಗೆ ತಪಾಸಣೆ ಮಾಡುವ ವೇಳೆ ಇಂತ ಘಟನೆ ನಡೆದಿದೆ. ರಾಜ್ಯದ ಶೇ. 30 ರಷ್ಟು ಪ್ರಕರಣ ತಬ್ಲಿಘಿ ಸಭೆಯಿಂದ ವಾಪಸಾದವರಿಂದಲೇ ಹರಡಿರುವ ಮಾಹಿತಿ ಬಯಲಾಗಿದೆ. ನಾನು ಪೊಲೀಸ್ ಆಯುಕ್ತರಿಗೆ ಮನವಿ ಮಾಡುತ್ತೇನೆ. ಇದರ ಹಿಂದೆ ಯಾರೇ ಇದ್ದರೂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಈಗಾಗಲೇ ಸಿಎಂ ಯಡಿಯೂರಪ್ಪ ಕೂಡ ಸೂಚನೆಯನ್ನು ನೀಡಿದ್ದಾರೆ. ಇದು ಯಾವುದೇ ಜಾತಿ, ಮತಕ್ಕೆ ಮಾತ್ರ ಬರುವ ಖಾಯಿಲೆಯಲ್ಲ. ಒಂದು ತಿಂಗಳಿಂದ ಲಾಕ್ಡೌನ್ ಇದೆ. ಪ್ರತಿ ಮನೆಗೂ ಹೋಗಿ ಮನವಿ ಮಾಡೋ ಸಮಯವಲ್ಲ. ಆದ್ರೂ ಕೂಡ ಕೊರೊನಾ ವೈರಸ್ ಹೇಳಿ ಕೇಳಿ ಬರೋದಿಲ್ಲ. ಕ್ಷೇತ್ರದಲ್ಲಿ ಮಾತು ಕೇಳೋ ಜನರ ಮೂಲಕ ಜಾಗೃತಿ ಮೂಡಿಸಬೇಕಿದೆ. ಶಾಸಕ ಜಮೀರ್ ಅಹ್ಮದ್ ಕೂಡ ಇದೇ ಕೆಲಸ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ರು.
ವೈದ್ಯರ ಚೀಟಿಗಳಿಲ್ಲದೆ ಆ್ಯಂಟಿ ಪೈರಟಿಕ್ ಡ್ರಗ್ಸ್ ಮಾರಾಟಕ್ಕೆ ಕಡಿವಾಣ:
ಆ್ಯಂಟಿ ಪೈರಟಿಕ್ ಡ್ರಗ್ಸ್ (ಡೋಲೋ, ಪಾರಾಸಿಟಮಲ್) ಮಾರಾಟ ಹೆಚ್ಚಾಗಿದೆ. ಜ್ವರದ ಲಕ್ಷಣಗಳನ್ನು ಮರೆ ಮಾಚಲು ಇರುವ ಮಾತ್ರೆ ಹೆಚ್ಚು ಮಾರಾಟ ಆಗುತ್ತಿದೆ. ಈ ಬಗ್ಗೆ ವರದಿ ಬಂದಿದೆ. ಹಾಟ್ ಸ್ಪಾಟ್ ಏರಿಯಾಗಳಲ್ಲಿ ಈ ಮಾತ್ರೆಗಳ ಖರೀದಿ ಹೆಚ್ಚಾಗಿದೆ ಎಂದರು. ವೈದ್ಯರ ಸಲಹಾ ಚೀಟಿಗಳಿಲ್ಲದೇ ಈ ಮಾತ್ರೆ ಪಡೆಯಲು ಹಾಗೂ ಮಾರಾಟ ಮಾಡಲು ಆಗದಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿರುವುದಾಗಿ ತೇಜಸ್ವಿ ಸೂರ್ಯ ತಿಳಿಸಿದರು.