ಬೆಂಗಳೂರು:ಕೊರೊನಾ ರೋಗದಿಂದ ಬಾಧಿತರಾದ ನೌಕರರು, ಕಾರ್ಮಿಕರು ಕ್ವಾರಂಟೈನ್‌ನಲ್ಲಿರುವ ಅವಧಿಯನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಬಾರದು ಎಂದು ಕಾರ್ಮಿಕ ಇಲಾಖೆ ಖಾಸಗಿ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಕೊರೊನಾ ಬಾಧಿತ ನೌಕರರ ಕ್ವಾರಂಟೈನ್ ಅವಧಿಯನ್ನು ಅನಧಿಕೃತ ಗೈರು ಎಂದು ಪರಿಗಣಿಸಬಾರದು: ಕಾರ್ಮಿಕ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿರುವ ಕಾರ್ಮಿಕ ಇಲಾಖೆ, ಕೋವಿಡ್ -19 ಸಾಂಕ್ರಾಮಿಕ ರೋಗವು ಸಮಾಜಕ್ಕೆ ಒಂದು ಸವಾಲಾಗಿ ಪರಿಣಮಿಸಿದೆ. ಕೊರೊನಾ ವೈರಸ್‌ನಿಂದ ಬಾಧಿತರಾಗುವ ವ್ಯಕ್ತಿಗಳು ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ. ಆ ಸಂದರ್ಭದಲ್ಲಿ ರೋಗಿಯು ಪ್ರತ್ಯೇಕವಾಗಿ ಇರಬೇಕಾದ ಅಗತ್ಯತೆ ಇರುತ್ತದೆ. ಈ ಹಿನ್ನೆಲೆ ಕೊರೊನಾ ರೋಗದಿಂದ ಬಾಧಿತರಾದ ನೌಕರರು, ಕಾರ್ಮಿಕರಿಗೆ ಅವರ ಹಕ್ಕಿನಲ್ಲಿರುವ ರಜೆಗಳನ್ನು ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಸೂಚಿಸಿದೆ.
ಇಎಸ್ಐ ವ್ಯಾಪ್ತಿಗೆ ಒಳಪಡದ ಕೊರೊನಾ ರೋಗದಿಂದ ಬಾಧಿತರಾದ ನೌಕರರು, ಕಾರ್ಮಿಕರಿಗೆ ಸಾಮಾಜಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಸ್ವಇಚ್ಛೆಯಿಂದ ಕ್ವಾರಂಟೈನ್ ಅವಧಿಗೆ ಅವರ ಹಕ್ಕಿನಲ್ಲಿ ಲಭ್ಯವಿರುವ ರಜೆಯನ್ನು ಮಂಜೂರು ಮಾಡಬೇಕು. ಕೊರೊನಾ ಬಾಧಿತ ನೌಕರರು, ಕಾರ್ಮಿಕರು ಅವರ ಖಾತೆಯಲ್ಲಿ ರಜೆ ಇಲ್ಲದಿದ್ದಲ್ಲಿ, ಇತರ ಕಾರ್ಮಿಕರ ರಜೆಯನ್ನು ವರ್ಗಾಯಿಸಿಕೊಂಡು ನಿಯಮಾನುಸಾರ ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಸೂಚನೆ ನೀಡಿದೆ.
ಕಾರ್ಮಿಕರ ಹಕ್ಕಿನಲ್ಲಿ ರಜೆಯು ಇಲ್ಲದಿದ್ದ ಪಕ್ಷದಲ್ಲಿ, ರಜೆಯನ್ನು ಈಗಾಗಲೇ ಸಂಪೂರ್ಣವಾಗಿ ಬಳಸಿಕೊಂಡಿದ್ದಲ್ಲಿ ಮುಂದಿನ ದಿನಗಳಲ್ಲಿ ಅವರು ಅರ್ಜಿ ಸಲ್ಲಿಸಬಹುದಾದ ರಜೆಯನ್ನು ಮುಂಗಡವಾಗಿ ಉಪಯೋಗಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಮಾಲೀಕರು ಸ್ವ-ಇಚ್ಛೆಯಿಂದ ರಜೆ ಮಂಜೂರು ಮಾಡಲು ಅವಕಾಶವಾಗದಿದ್ದಲ್ಲಿ ಕಾರ್ಮಿಕರ ಹಕ್ಕಿನಲ್ಲಿ ರಜೆ ಇಲ್ಲದಿದ್ದಲ್ಲಿ ವಿಶೇಷ ರಜೆಯನ್ನು ನೀಡುವ ಕುರಿತು ಮಾಲೀಕರು ಮತ್ತು ಕಾರ್ಮಿಕರು ಸಮಾಲೋಚನೆ ನಡೆಸಿ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.