ಬೆಂಗಳೂರು: ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಮಹನೀಯರನ್ನು ಸ್ಮರಿಸುವ ಸಲುವಾಗಿ ಕಾಂಗ್ರೆಸ್ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದ ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೆರವೇರಿಸಿದರು.
ಇದಾದ ನಂತರ ಕಾಂಗ್ರೆಸ್ ಭವನದಿಂದ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿವರೆಗೆ ನಡೆದ ಧ್ವಜ ಪಥ ಸಂಚಲನ ಜಾಥಾಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸೇವಾದಳದ ಅಧ್ಯಕ್ಷೆ ಪ್ಯಾರಿಜಾನ್, ಕರ್ನಾಟಕ ಉಸ್ತುವಾರಿಗಳಾದ ಬಲರಾಂ ಸಿಂಗ್ ಬದೋರಿಯಾ, ಸೇವಾದಳದ ದಕ್ಷಿಣ ಉಸ್ತುವಾರಿ ರೇಣುಕಾ ಪ್ರಸಾದ್, ಕಾರ್ಯಾಧ್ಯಕ್ಷರಾದ ಕಿರಣ್ ಮೊರಾಸ್, ತುಳಸಿಗಿರಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ವಿ.ಎಸ್. ಆರಾಧ್ಯ, ಸೇವಾದಳದ ಯಂಗ್ ಬ್ರಿಗೇಡ್ ಅಧ್ಯಕ್ಷ ಜುನೈದ್ ಪಿಕೆ ಮತ್ತಿತರರು ಉಪಸ್ಥಿತರಿದ್ದರು.
ಕ್ವಿಟ್ ಇಂಡಿಯಾ ಚಳುವಳಿಯನ್ನು ಸಂಕೇತಿಸುವ ಚರಕ ಒಳಗೊಂಡ ಧ್ವಜವನ್ನು ಸೇವಾದಳ ಅಧ್ಯಕ್ಷೆ ಪ್ಯಾರಿಜಾನ್ಗೆ ಸಲೀಂ ಅಹಮದ್ ಹಸ್ತಾಂತರಿಸಿದ ನಂತರ ಕಾಂಗ್ರೆಸ್ ಧ್ವಜ ಹಾಗೂ ಕ್ವಿಟ್ ಇಂಡಿಯಾ ಧ್ವಜವನ್ನು ಹಿಡಿದು ಕಾಂಗ್ರೆಸ್ ಮುಖಂಡರು ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿವರೆಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ತೆರಳಿದರು.