ಬೆಂಗಳೂರು:ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನೇರ ನೇಮಕಾತಿಗೆ ಲಭ್ಯವಿರುವ ಸುಮಾರು ಒಂದು ಸಾವಿರ ಹುದ್ದೆಗಳನ್ನು ತುಂಬಲು ಮುಂದಿನ ಆರು ತಿಂಗಳ ಅವಧಿಯಲ್ಲಿ ಕ್ರಮ ವಹಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಗೆ ಹೊಸದಾಗಿ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಾಂಕೇತಿಕ ನೇಮಕಾತಿ ಆದೇಶ ಪ್ರತಿಗಳನ್ನ ವಿತರಣೆ ಮಾಡಲಾಯಿತು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಇಷ್ಟರಲ್ಲಿಯೇ ಖಾಲಿಯಿರುವ ಎಲ್ಲ ಬೋಧಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿವಿಧ ವಿಷಯಗಳ 1194 ಉಪನ್ಯಾಸಕ ಅಭ್ಯರ್ಥಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯ್ಕೆ ಮಾಡಿದೆ. ಅವರಲ್ಲಿ 1161 ಮಂದಿ ಈಗಾಗಲೇ ಸ್ಥಳ ನಿಯುಕ್ತಿ ಮಾಡಿಕೊಂಡಿದ್ದಾರೆ. 1203 ಉಪನ್ಯಾಸಕರ ಆಯ್ಕೆಗೆ 2015ರಿಂದ ಪ್ರಕ್ರಿಯೆ ಶುರುವಾಗಿತ್ತು. ಆದರೆ, ಅದು ಅರ್ಜಿ ಕರೆದುದರ ಹೊರತಾಗಿ ಮುಂದೆ ಹೋಗಿರಲಿಲ್ಲ. 2019ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಪ್ರಕ್ರಿಯೆಗೆ ವೇಗ ದೊರಕಿತು. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಪ್ರಕ್ರಿಯೆಗೆ ವೇಗ ದೊರಕಿತು ಎಂದರು.
ಉಪನ್ಯಾಸಕರ ಆಯ್ಕೆ ಪೂರ್ಣಗೊಂಡು ಸ್ಥಳ ನಿಯುಕ್ತಿ ಮಾಡಿ ಇಂದು ಆದೇಶ ನೀಡುತ್ತಿದ್ದೇವೆ. ಈ ಕೆಲಸ ಇನ್ನೂ ಆರು ತಿಂಗಳ ಮೊದಲೇ ನಡೆಯಬೇಕಿತ್ತು. ಆದರೆ ಕೋವಿಡ್-19 ಪ್ರಸರಣದಿಂದಾಗಿ ಲಾಕ್‍ಡೌನ್ ಹಿನ್ನೆಲೆ ಹಾಗೂ ಶಾಲಾ ಕಾಲೇಜುಗಳು ಪುನರಾರಂಭವಾಗುವುದರ ಅನಿಶ್ಚಿತ ವಾತಾವರಣದ ಹಿನ್ನೆಲೆಯಲ್ಲಿ ಈಗ ಇದಕ್ಕೆ ಮಹೂರ್ತ ನಿಗದಿಯಾಗಿದೆ, ತಾವು ಇಲಾಖೆಯ ಸಚಿವರಾದ ಮಾರನೇ ದಿನವೇ ಈ ಕುರಿತು ಅಧಿಕಾರಿಗಳ ಸಭೆ ನಡೆಸಿದೆ. ಸಚಿವನಾಗಿ ನಾನು ಕೈಗೆತ್ತಿಕೊಂಡ ಮೊದಲ ಕೆಲಸ ಇದು ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ ಎಂದು ಸಚಿವ ಸುರೇಶ್‌ಕುಮಾರ್ ಹೇಳಿದರು.