ಬೆಂಗಳೂರು:ಕಬ್ಬನ್ ಪಾರ್ಕ್ಗೆ ಹೊಂದಿಕೊಂಡಿರುವ ಪುರಾತನ ಕಟ್ಟಡವಾಗಿರುವ ಸೆಂಚುರಿ ಕ್ಲಬ್ ಅನ್ನು ಉದ್ಯಾನ ವಲಯದಿಂದ ಹೊರಗಿಡುವ ಕುರಿತು ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಲಿದೆ ಎಂದು ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪರ ಸಭಾನಾಯಕ ಬೋಸರಾಜ್ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಪ್ರಸ್ತಾಪಕ್ಕೆ ಉತ್ತರಿಸಿದ ಸಭಾನಾಯಕರು, ಸೆಂಚುರಿ ಕ್ಲಬ್ ಅನ್ನು ಪಾರ್ಕ್ ಜೋನ್ ನಿಂದ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ. ಸೆಂಚುರಿ ಕ್ಲಬ್ ಪ್ರವೇಶ ದ್ವಾರದ ವಿಷಯ ಸಂಬಂಧ ಪಿಐಎಲ್ ನಿಂದ ಮಧ್ಯಂತರ ಆದೇಶವಾಗಿದೆ, ಅಂತಿಮ ಆದೇಶ ಬರವೇಕಿದೆ. ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಸಭೆ ಕರೆದು ಪರಿಹರಿಸಲಾಗುತ್ತದೆ. ವೈಎಂಸಿ ಕಟ್ಟಡ ಬಿಟ್ಟು ಇರುವುದೆಲ್ಲಾ ಸರ್ಕಾರದ ಕಟ್ಟಡಗಳೇ. ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಆದಷ್ಟು ಬೇಗ ಸಭಾಪತಿಗಳ ನೇತೃತ್ವದಲ್ಲಿ ಚರ್ಚಿಸಿ ಪರಿಹರಿಸಲಾಗುತ್ತದೆ ಎಂದರು.
ಕ್ಲಬ್ ವಿಚಾರದ ಚರ್ಚೆಗೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಆಕ್ಷೇಪಿಸಿ, ಮೈಸೂರು ಅರಸರಾದ ಒಡೆಯರ್ ಮತ್ತು ವಿಶ್ವೇಶ್ವರಯ್ಯ ಆರಂಭಿಸಿದಾಗಿನ ಕ್ಲಬ್ ಚಿಂತನೆ ಬೇರೆಯೇ ಇತ್ತು. ಆದರೆ ಇಂದು ಅದು ಉಳಿದಿಲ್ಲ, ಕ್ಲಬ್ ಬಗ್ಗೆ ಸದನದಲ್ಲಿ ನಾವು ಮಾತನಾಡುತ್ತಿರುವುದೇ ತಲೆತಗ್ಗಿಸುವ ವಿಷಯ, ಹೈಕೋರ್ಟ್ ಅಂತಿಮ ತೀರ್ಪು ಬರುವ ಮೊದಲೇ ಸಭೆ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಶಾಸಕರು, ಮಾಜಿ ಶಾಸಕರಿಗೆ ಕ್ಲಬ್ ಮಾಡಬೇಕು ಎನ್ನುವುದು 20 ವರ್ಷದ ಬೇಡಿಕೆಯಾಗಿದೆ. ಆದರೆ ಇನ್ನೂ ಆಗಿಲ್ಲ, ಕಾರಣ ಜಾಗದ ಸಮಸ್ಯೆಯಾಗಿದೆ ಎಂದು ಹೇಳಿದರು.
ಈಗ ಬಾಲಬ್ರೂಯಿ ಕಟ್ಟಡದಲ್ಲಿ ಕ್ಲಬ್ ಮಾಡಲು ನಿರ್ಧರಿಸಿದರೂ ಅದೂ ಕೋರ್ಟ್ ಮೆಟ್ಟಿಲೇರಿದೆ. ಆದರೆ ಮರಗಿಡ ಕಡಿಯದೆ ಮಾಡಿ ಎಂದು ಈಗ ಕೋರ್ಟ್ ಹೇಳಿದೆ. ಸಿಎಂ ಅಧಿಕೃತ ವಾಸಕ್ಕೆ ಬಳಕೆಯಾಗುತ್ತಿದ್ದ ಬಾಲಬ್ರೂಯಿ ಡೆಸಿಗ್ನೇಟೆಡ್ ಹೌಸ್ ಅನ್ನು ಕ್ಲಬ್ ಮಾಡಲು ಹೊರಟಿದ್ದೇವೆ. ಈಗ ಸೆಂಚುರಿ ಕ್ಲಬ್ ಪರ ಚರ್ಚೆ ಮಾಡುತ್ತಿದ್ದೇವೆ. ಕೋರ್ಟ್ ತೀರ್ಪಿಗೂ ಮುನ್ನ ಸಭೆ ಮಾಡಬೇಕಾ? ಪರಾಮರ್ಶಿಸಿ ಎಂದರು.
ಜೆಡಿಎಸ್ ಸದಸ್ಯ ಭೋಜೇಗೌಡ ಮಾತನಾಡಿ, ಇಸ್ಪೀಟ್ ಮತ್ತು ಬಾರ್ ನಿಂದ ಕ್ಲಬ್ ನಡೆಯುತ್ತವೆ. ಯಾವುದೇ ಸಮಾಜಮುಖಿ ಕಾರ್ಯವನ್ನು ಅವು ಮಾಡಲ್ಲ. ಅದನ್ನು ನಾವೇಕೆ ಬೆಂಬಲಿಸಬೇಕು? ಕೆಲ ಕ್ಲಬ್ ನಲ್ಲಿ ಸೂಟ್ ಕಡ್ಡಾಯ, ಪಂಚೆ ಹಾಕಿದರೆ ನೋ ಎಂಟ್ರಿ, ಚಪ್ಪಲಿ ಹಾಕಿದರೆ ಎಂಟ್ರಿ ಇಲ್ಲ, ದೇವೇಗೌಡರು ಶೂ ಯಾವಾಗಲಾದರೂ ಹಾಕಿದ್ದಾರಾ?. ಇಂಗ್ಲಿಷ್ರ ದಬ್ಬಾಳಿಕೆಗೆ ಪ್ರತಿಯಾಗಿ ವಿಶ್ವೇಶ್ವರಯ್ಯ ಕ್ಲಬ್ ಮಾಡಿದರು. ಈಗ ಅದೇ ಇಂಗ್ಲಿಷ್ರ ದಬ್ಬಾಳಿಕೆ ಪೋಷಣೆಗೆ ಅವಕಾಶ ಕೊಡಬೇಕಾ? ಎಂದು ಪ್ರಶ್ನಿಸಿದರು.
ಸದಸ್ಯರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಹೈಕೋರ್ಟ್ ಕೇಸ್ ಕ್ಲಬ್ ವಿಚಾರದಲ್ಲಿ ಇಲ್ಲ, ಕೇವಲ ಗೇಟ್ ವಿಚಾರದಲ್ಲಿ ಇದೆ. ಹಾಗಾಗಿ ಕಾನೂನು ಮಂತ್ರಿ ಜೊತೆ ಚರ್ಚಿಸಿ ಎಂದು ಸಲಹೆ ನೀಡಿದರು. ನಂತರ ಚರ್ಚೆಗೆ ಉತ್ತರ ನೀಡಿದ ಸಭಾನಾಯಕ ಬೋಸರಾಜ್, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಆದಷ್ಟು ಬೇಗ ಸೆಂಚುರಿ ಕ್ಲಬ್ ಅನ್ನು ಪಾರ್ಕ್ ಜೋನ್ ನಿಂದ ಹೊರಗಿಡುವ ಬೇಡಿಕೆ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ:ಬಿಜೆಪಿ ಸರ್ಕಾರದ ಅವಧಿಯ ಎಪಿಎಂಸಿ ಕಾಯ್ದೆ ಹಿಂಪಡೆಯುವ ತಿದ್ದುಪಡಿ ವಿಧೇಯಕ ಅಂಗೀಕಾರ: ಬಿಜೆಪಿ, ಜೆಡಿಎಸ್ ವಿರೋಧ