ಬೆಂಗಳೂರು:ಕರ್ನಾಟಕದ ಪ್ರತಿ ಮುನ್ಸಿಪಲ್ ಕಾರ್ಪೊರೇಷನ್‌ನ ಪ್ರತಿ ವಾರ್ಡ್‌ಗಳಲ್ಲಿ 'ಅಟಲ್ ಆಹಾರ ಕೇಂದ್ರ' ಸ್ಥಾಪಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, 2017ರ ಆಗಸ್ಟ್‌ನಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರ ಪ್ರಾರಂಭಿಸಿದ್ದ 'ಇಂದಿರಾ ಕ್ಯಾಂಟೀನ್'ಗಳ ಭವಿಷ್ಯವನ್ನು ಪ್ರಶ್ನಿಸಿದೆ. ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೋಮವಾರ 'ಪ್ರಜಾ ಪ್ರಣಾಳಿಕೆ' ಬಿಡುಗಡೆ ಮಾಡಿದರು.
ಡೆಲಿವರಿ ಬಾಯ್‌ಗಳು, ಕ್ಯಾಬ್‌ಗಳು, ಆಟೋ ಚಾಲಕರು ಮತ್ತು ಅಸಂಘಟಿತ ಕಾರ್ಮಿಕರಿಗೆ ವಿಶೇಷ ಗಮನ ನೀಡುವ ಮೂಲಕ ರಾಜ್ಯಾದ್ಯಂತ ಕೈಗೆಟುಕುವ, ಗುಣಮಟ್ಟದ ಮತ್ತು ಆರೋಗ್ಯಕರ ಆಹಾರ ಒದಗಿಸಲು ನಾವು ರಾಜ್ಯದ ಪ್ರತಿ ಮುನ್ಸಿಪಲ್ ಕಾರ್ಪೊರೇಷನ್‌ನ ಪ್ರತಿ ವಾರ್ಡ್‌ಗಳಲ್ಲಿ 'ಅಟಲ್ ಆಹಾರ ಕೇಂದ್ರ' ಸ್ಥಾಪಿಸುತ್ತೇವೆ ಎಂದು ನಡ್ಡಾ ಯೋಜನೆ ಬಗ್ಗೆ ಹೇಳಿದ್ದರು. ಇದೇ ವೇಳೆ, ಇಂದಿರಾ ಕ್ಯಾಂಟೀನ್ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂದಿರಾ ಕ್ಯಾಂಟೀನ್ ಯೋಜನೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಅಟಲ್ ಆಹಾರ ಕೇಂದ್ರ ಜನಸಾಮಾನ್ಯರ ಬಗ್ಗೆ ಕಾಳಜಿ ವಹಿಸಲಿದೆ ಎಂದು ನಡ್ಡಾ ಹೇಳಿದರು.
ಬಿಜೆಪಿ ಪ್ರಣಾಳಿಕೆ ಬಿಡುಗಡೆ ಬಳಿಕ ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಸರ್ಕಾರದ ಅಧಿಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಸ್ಥಾಪಿಸಿದ್ದ 600 ಇಂದಿರಾ ಕ್ಯಾಂಟೀನ್‌ಗಳನ್ನು ಸೇಡಿನ ರೀತಿಯಲ್ಲಿ ಮುಚ್ಚಿಸಿ ‘ಅಟಲ್ ಆಹಾರ ಕೇಂದ್ರ’ ತೆರೆಯುವುದಾಗಿ ಭರವಸೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಬೆಂಗಳೂರಿನಲ್ಲಿ ಸುಮಾರು 200 ಕಡೆಗಳಲ್ಲಿ 94 ಕೋಟಿ ರೂಪಾಯಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿತ್ತು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಈಗಿನ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚುವುದು ಅಥವಾ ಅವುಗಳ ಹೆಸರನ್ನು ಬದಲಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಪದೇ ಪದೆ ಆರೋಪ ಮಾಡುತ್ತ ಬಂದಿತ್ತು. ಅಲ್ಲದೇ ಈ ಹಿಂದೆ ಸಿದ್ದರಾಮಯ್ಯ "ಬಡವರ ಹಸಿವಿನ ಬಗ್ಗೆ ಅರಿವಿಲ್ಲದಷ್ಟು ನಿಮ್ಮ ಹೊಟ್ಟೆ ತುಂಬಿದೆಯೇ? ಅಥವಾ ನಿಮ್ಮ ಪಕ್ಷವು ಕೇವಲ ಗಣ್ಯರ ಹಸಿವನ್ನು ಪೂರೈಸುತ್ತದೆಯೇ? ಇಂದಿರಾ ಕ್ಯಾಂಟೀನ್ ನಾಶಪಡಿಸುವ ಯಾವುದೇ ಪ್ರಯತ್ನವನ್ನು ನಾವು ಎಂದಿಗೂ ಸಹಿಸುವುದಿಲ್ಲ" ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿ ಎಸ್ ಯಡಿಯೂರಪ್ಪ, ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚುವ ಅಥವಾ ಮರು ನಾಮಕರಣ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ತಮಿಳುನಾಡಿನ 'ಅಮ್ಮ ಕ್ಯಾಂಟೀನ್' ಮಾದರಿಯಲ್ಲಿ ಕಾಂಗ್ರೆಸ್ ಸರ್ಕಾರ 2017ರ ಆಗಸ್ಟ್ ತಿಂಗಳಲ್ಲಿ ಇಂದಿರಾ ಕ್ಯಾಂಟಿನ್ ಯೋಜನೆ ಪ್ರಾರಂಭಿಸಿತು. ಈ ಯೋಜನೆಗಾಗಿ ಕಾಂಗ್ರೆಸ್ ಸರ್ಕಾರ 94 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿ ವಾರ್ಡ್‌ನಲ್ಲಿ ಪ್ರತಿ ಕ್ಯಾಂಟೀನ್ ನಿರ್ಮಿಸಲು 90 ಲಕ್ಷ ರೂ ವೆಚ್ಚ ತಗುಲಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕ್ಯಾಂಟೀನ್ನಿಂದ ವಾರ್ಷಿಕ ಸುಮಾರು 100 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿತ್ತು. ಪ್ರತಿ ವ್ಯಕ್ತಿಯ ಊಟಕ್ಕೆ ತಲಾ 27 ರೂಪಾಯಿ ವೆಚ್ಚವಾಗುತ್ತಿತ್ತು. ಬೆಂಗಳೂರಿನಾದ್ಯಂತ ಇರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿತ್ಯ ಸುಮಾರು ಮೂರು ಲಕ್ಷ ಜನರು ಆಹಾರ ಸೇವೆನೆ ಮಾಡುತ್ತಿದ್ದಾರೆ ಎಂದು ಅವರು ಎಂದು ಅಧಿಕಾರಿಗಳು ವಿವರಿಸಿದರು. ಅವರ ಪ್ರಕಾರ, 'ಅಟಲ್ ಆಹಾರ ಕೇಂದ್ರ'ದ ಪರಿಕಲ್ಪನೆಯು ಇಂದಿರಾ ಕ್ಯಾಂಟೀನ್‌ಗಳಂತೆಯೇ ಇದೆ, ಅಲ್ಲಿ ಜನರಿಗೆ ಐದು ರೂಪಾಯಿಗೆ ಉಪಹಾರ ಮತ್ತು ದಿನಕ್ಕೆ ಎರಡು ಬಾರಿ ಊಟಕ್ಕೆ ತಲಾ 10 ರೂ. ಆಗಲಿದೆ.
ಇದನ್ನೂ ಓದಿ:ಬಿಜೆಪಿಯ ಸುಳ್ಳಿನ ಪ್ರಣಾಳಿಕೆಯನ್ನು ಗುಜರಿ ವ್ಯಾಪಾರಿಗಳೂ ಖರೀದಿಸುವುದಿಲ್ಲ: ಕಾಂಗ್ರೆಸ್