ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲೇ ಸಚಿವರಿಬ್ಬರು ವಾಕ್ಸಮರ ನಡೆಸಿದ ಘಟನೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದಿದೆ.
ಬಿಡಿಎ ಸಕ್ರಮೀಕರಣ ಉಪಸಮಿತಿ ಸಭೆಯಲ್ಲಿ ಸೋಮಣ್ಣ ಮಾಧುಸ್ವಾಮಿ ನಡುವೆ ವಾಕ್ಸಮರ..! - ಸೋಮಣ್ಣ ಮಾಧುಸ್ವಾಮಿ ನಡುವೆ ವಾಕ್ಸಮರ
ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಿಡಿಎ ಸಕ್ರಮೀಕರಣ ಉಪಸಮಿತಿ ಸಭೆಯಲ್ಲಿ ವಿಷಯವೊಂದಕ್ಕೆ ಸಂಬಂಧಪಟ್ಟಂತೆ ವಸತಿ ಸಚಿವ ವಿ.ಸೋಮಣ್ಣ ಮತ್ತು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ನಡುವೆ ವಾಗ್ವಾದ ನಡೆಯಿತು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಸಕ್ರಮೀಕರಣ ಉಪಸಮಿತಿ ಸಭೆಯಲ್ಲಿ ಅಕ್ರಮ ಸಕ್ರಮ ಯೋಜನೆ ಮೂಲಕ ರಾಜಸ್ವ ಸಂಗ್ರಹಕ್ಕೆ ನಿರ್ಧರಿಸಿದ್ದಂತೆ ಬಿಡಿಎ ವ್ಯಾಪ್ತಿಗೆ ಸೀಮಿತವಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ಬಡವರಿಗೆ ಅನುಕೂಲವಾಗುವ ಈ ಕಾನೂನನ್ನು ತಕ್ಷಣವೇ ಜಾರಿಗೆ ತರಬೇಕು, ಇದರಿಂದ ಸಾಕಷ್ಟು ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಒತ್ತಾಯಿಸಿದರು. ಆದರೆ, ಇದಕ್ಕೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ, ಕಾನೂನು ಪ್ರಕಾರ ಈಗ ಜಾರಿ ಸಾಧ್ಯವಿಲ್ಲ ಎಂದರು.
ಕಾನೂನು ಸಚಿವರ ಆಕ್ಷೇಪಕ್ಕೆ ಸೋಮಣ್ಣ ಅಸಮಧಾನ ವ್ಯಕ್ತಪಡಿಸಿದರು. ಈ ವೇಳೆ ಮಾಧುಸ್ವಾಮಿ ಮತ್ತು ಸೋಮಣ್ಣ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರು ಸಚಿವರು ಎದ್ದು ನಿಂತು ವಾಕ್ಸಮರ ನಡೆಸಿದರು. ಅಕ್ಕಪಕ್ಕದಲ್ಲಿ ಕುಳಿತಿದ್ದ ಇತರ ಸಚಿವರು ಇವರಿಬ್ಬರನ್ನು ಸಮಾಧಾನಪಡಿಸಲು ಯತ್ನಿಸಿದರು. ಅಂತಿಮವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಧ್ಯಪ್ರವೇಶಿಸಿ ಸಚಿವ ಮಾಧುಸ್ವಾಮಿಯನ್ನು ನಾನೇ ಸಭೆಗೆ ಆಹ್ವಾನಿಸಿದ್ದೇನೆ ಎಂದು ಸೋಮಣ್ಣ ಅವರನ್ನು ಸಮಾಧಾನಪಡಿಸಿ ಸಭೆ ಮುಂದುವರೆಸಲು ಸೂಚಿಸಿದರು. ಇಬ್ಬರು ಸಚಿವರ ವಾಗ್ವಾದದಿಂದ ಅಸಮಧಾನಗೊಂಡ ಸಿಎಂ ಸಭೆಯ ಅರ್ಧದಲ್ಲೇ ನಿರ್ಗಮಿಸಿದರು.