ಬೆಂಗಳೂರು: ನ್ಯಾಯ ಅರಸಿ ಪೊಲೀಸ್ ಠಾಣೆಗಳಲ್ಲಿ ಹೋಗುವವರನ್ನ ಗಂಟೆಗಟ್ಟಲೇ ಪೊಲೀಸರು ಕಾಯಿಸುತ್ತಾರೆ ಎಂಬ ಆರೋಪ ಸರ್ವೇ ಸಾಮಾನ್ಯವಾಗಿದೆ. ಆದರೆ, ತಮ್ಮ ಸಾಂಪ್ರದಾಯಿಕ ಆರೋಪ ದೂರ ಮಾಡಲು ಹಾಗೂ ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಿಸಲು ಈಶಾನ್ಯ ವಿಭಾಗದ ಪೊಲೀಸರು ಮುಂದಾಗಿದ್ದಾರೆ.
ಪೊಲೀಸ್ ಠಾಣೆಗಳಿಗೆ ಬರುವ ದೂರುದಾರರನ್ನು ಗಂಟೆಗಟ್ಟಲೇ ಕಾಯಿಸದೇ ತ್ವರಿತಗತಿಯಲ್ಲಿ ದೂರು ಸ್ವೀಕರಿಸುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್ ಸಾಫ್ಟ್ವೇರ್ ಸಿದ್ದಪಡಿಸಿದ್ದಾರೆ. ನಗರ ಆಗ್ನೇಯ ವಿಭಾಗದ ವ್ಯಾಪ್ತಿಯಲ್ಲಿ ಬರುವ ಸೈಬರ್ ಸ್ಟೇಷನ್ ಸೇರಿ 13 ಪೊಲೀಸ್ ಠಾಣೆಗಳಿದ್ದು, ಈ ಎಲ್ಲ ಪೊಲೀಸ್ ಠಾಣೆಗಳಿಗೆ ಬರುವ ದೂರುದಾರರು ಹಾಗೂ ಸಂದರ್ಶಕರಿಗಾಗಿ ಪೊಲೀಸ್ ಆ್ಯಪ್ ಸಿದ್ಧಪಡಿಸಲಾಗಿದೆ. ವಿವಿಧ ಕಾರಣಗಳಿಗಾಗಿ ಎಡತಾಕುವ ಸಂದರ್ಶಕರು ಪೊಲೀಸರ ಸ್ಪಂದನೆ ಕುರಿತಂತೆ ತಮ್ಮ ಅಭಿಪ್ರಾಯ ತಿಳಿಸಬಹುದಾಗಿದೆ.