ಬೆಂಗಳೂರು:ಕಳೆದ ವರ್ಷದ ಮಹಾಮಳೆಯ ಪ್ರಳಯದಿಂದ ರಾಜ್ಯ ಚೇತರಿಸಿಕೊಳ್ಳುತ್ತಿರುವಾಗಲೇ ಈ ಬಾರಿ ಮತ್ತೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನೆರೆಯ ಹೊಡೆತಕ್ಕೆ ಹಾನಿಯಾಗಿರುವ ರಸ್ತೆ, ಸೇತುವೆಗಳ ದುರಸ್ತಿ ಕಾಮಗಾರಿಗೆ ಹಣ ಹೊಂದಿಸುವುದೇ ಲೋಕೋಪಯೋಗಿ ಇಲಾಖೆಗೆ ಅಸಾಧ್ಯ ಎಂಬಂತಾಗಿದೆ. ಈ ನಡುವೆ ಹಣವಿಲ್ಲದೆ ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿ ಬಿಲ್ ಮೊತ್ತವೇ ಬೆಟ್ಟದಷ್ಟಿದೆ.
ಕಳೆದ ವರ್ಷದ ಮಹಾಮಳೆಗೆ ಅತಿ ಹೆಚ್ಚು ನಷ್ಟ ಅನುಭವಿಸಿರುವ ಇಲಾಖೆಗಳ ಪೈಕಿ ಲೋಕೋಪಯೋಗಿ ಇಲಾಖೆ ಮೊದಲಿಗನಾಗಿತ್ತು. ಅಪಾರ ಪ್ರಮಾಣದ ರಸ್ತೆ, ಸೇತುವೆಗಳು ಹಾನಿಗೊಳಗಾಗಿದ್ದು, ಅವುಗಳ ದುರಸ್ತಿ ಕಾಮಗಾರಿಗೆ ಹಣಹೊಂದಿಸುವಲ್ಲೇ ಬೆವರಿಳಿಸಿತ್ತು.
ರಸ್ತೆ, ಸೇತುವೆ ದುರಸ್ತಿ ಕಾಮಗಾರಿ ಸ್ಥಿತಿಗತಿ
ಕಳೆದ ವರ್ಷ ಮಹಾಮಳೆಗೆ ರಾಜ್ಯಾದ್ಯಂತ ಒಟ್ಟು 2,091 ಕಿ.ಮೀ ರಸ್ತೆ ಹಾನಿಗೊಳಗಾಗಿತ್ತು. ಅಂದರೆ ಅಂದಾಜು 388.14 ಕೋಟಿ ರೂ. ಮೌಲ್ಯದ ರಸ್ತೆಗಳು ಹಾನಿಗೀಡಾಗಿದ್ದವು.
ಅದೇ ನೆರೆಗೆ ಒಟ್ಟು 669 ಸೇತುವೆಗಳು ಕೊಚ್ಚಿ ಹೋಗಿದ್ದವು. ಒಟ್ಟು 139.06 ಕೋಟಿ ರೂ. ಸೇತುವೆಗಳು ನಾಮಾವಶೇಷವಾಗಿದ್ದವು. ಅನುದಾನದ ಕೊರತೆಯ ಮಧ್ಯೆ ಲೋಕೋಪಯೋಗಿ ಇಲಾಖೆಗೆ ಈ ಅಪಾರ ಹಾನಿಗೊಳಗಾದ ರಸ್ತೆ, ಸೇತುವೆಗಳ ದುರಸ್ತಿ ಕಾಮಗಾರಿ ಕೈಗೊಳ್ಳುವ ಅನಿವಾರ್ಯತೆ ಇತ್ತು. ಹೀಗಾಗಿ ಅಳೆದುತೂಗಿ ಹಣ ಹೊಂದಿಸಿ ದುರಸ್ತಿ ಕಾಮಗಾರಿಯನ್ನು ಇಲಾಖೆ ಕೈಗೊಂಡಿದೆ. ಈ ಪೈಕಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ ಹಲವೆಡೆ ಕಾಮಗಾರಿಗಳು ಅಪೂರ್ಣವಾಗಿವೆ.
ಲೋಕೋಪಯೋಗಿ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ದಕ್ಷಿಣ ವಲಯದಲ್ಲಿ ಕಳೆದ ವರ್ಷ ಹಾನಿಗೀಡಾದ ಪ್ರವಾಹಕ್ಕೆ ಹಾನಿಗೀಡಾದ 164 ರಸ್ತೆ ದುರಸ್ತಿ ಕಾಮಗಾರಿಗಳ ಪೈಕಿ 30 ಕಾಮಗಾರಿ ಅಪೂರ್ಣವಾಗಿವೆ. ಅದೇ ಉತ್ತರ ವಲಯದಲ್ಲಿನ ಹಾನಿಗೊಳಗಾದ 505 ರಸ್ತೆ ದುರಸ್ತಿ ಕಾಮಗಾರಿಗಳ ಪೈಕಿ 14 ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ.
ಇತ್ತ ಈಶಾನ್ಯ ವಲಯದಲ್ಲಿನ 34 ಕಾಮಗಾರಿಗಳ ಪೈಕಿ ಎಲ್ಲವನ್ನೂ ಪೂರ್ಣಗೊಳಿಸಲಾಗಿದೆ. ಕೇಂದ್ರ ವಲಯದಲ್ಲಿನ 483 ದುರಸ್ತಿ ಕಾಮಗಾರಿಗಳ ಪೈಕಿ 32 ಕಾಮಗಾರಿಗಳು ಅಪೂರ್ಣವಾಗಿ ಉಳಿದುಕೊಂಡಿವೆ.