ಬೆಂಗಳೂರು:ರಾತ್ರೋರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ವೃದ್ಧೆ ಮತ್ತು ಮಗನ ಸ್ನೇಹಿತನನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಇದೀಗ ಪ್ರಕರಣದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಅವಳಿ ಕೊಲೆ ನಡೆದಿದ್ದು, ಆರೋಪಿ ಮಂಜುನಾಥ್ ಅಲಿಯಾಸ್ ಅಂಬಾರಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೋಣನಕುಂಟೆ ಬಳಿ ತಲೆಮರೆಸಿಕೊಂಡಿದ್ದರ ಬಗ್ಗೆ ಮಾಹಿತಿ ತಿಳಿದ ಪೊಲೀಸರು, ಆತನನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ್ದರು. ಆಗ ಆರೋಪಿ ಮಂಜುನಾಥ್ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಕಿಶೋರ್ ಆರೋಪಿ ಕಾಲಿಗೆ ಫೈರ್ ಮಾಡಿದ್ದಾರೆ.
ಘಟನೆಯ ವಿವರ:
ಆರೋಪಿ ಇದೇ ಏಪ್ರಿಲ್ 7ರ ತಡರಾತ್ರಿ ಪಶ್ಚಿಮ ಬಂಗಾಳ ಮೂಲದ ಮಮತಾ ಬಸು ಹಾಗೂ ಈಕೆಯ ಮಗನ ಸ್ನೇಹಿತ ಒಡಿಶಾ ಮೂಲದ ದೇವಬ್ರತಾ ಎಂಬುವರನ್ನು ಹತ್ಯೆಗೈದಿದ್ದ. ಚಿನ್ನಾಭರಣ, ಹಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಪಡೆಯಲು ಕೃತ್ಯ ಎಸಗಿದ್ದ ಎಂದು ತಿಳಿದುಬಂದಿದೆ.
ಹತ್ಯೆ ಬಳಿಕ ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಕದ್ದೊಯ್ದಿದ್ದಾನೆ. ಈ ಬಗ್ಗೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ ಆರೋಪಿ ಮಂಜುನಾಥ್ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ರಾತ್ರಿ ಮನೆಗೆ ನುಗ್ಗಿ ಡಬಲ್ ಮರ್ಡರ್: ನಗ,ನಾಣ್ಯ ದೋಚಿ ಹಂತಕ ಪರಾರಿ