ಬೆಂಗಳೂರು:ಶಿಕ್ಷಕರ, ಪದವೀಧರರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ಹಾಗು ಪ್ರಯತ್ನ ಮಾಡುವುದಾಗಿ ಶಿಕ್ಷಕ ಹಾಗು ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಭರವಸೆ ನೀಡಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಪುಟ್ಟಣ್ಣ, ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಚಿದಾನಂದಗೌಡ ನಾಮಪತ್ರ ಸಲ್ಲಿಕೆ.. ಶಾಂತಿನಗರದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ ಮತ್ತು ಆಗ್ನೇಯ ಪದವೀಧರ ಕ್ಷೇತ್ರದಿಂದ ಚಿದಾನಂದಗೌಡ ನಾಮ ಪತ್ರ ಸಲ್ಲಿಕೆ ಮಾಡಿದರು. ಬೆಳಿಗ್ಗೆ 11.20 ಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಡಿಸಿಎಂ, ಡಾ. ಅಶ್ವತ್ಥನಾರಾಯಣ , ಸಚಿವರಾದ ಸುಧಾಕರ್, ಸಿ. ಟಿ ರವಿ ಉಪಸ್ಥಿತಿಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ನಂತರ ಇಬ್ಬರು ಅಭ್ಯರ್ಥಿಗಳಿಗೆ ಸಿಎಂ ಯಡಿಯೂರಪ್ಪ ಶುಭ ಕೋರಿದರು. ಜನರತ್ತ ಕೈ ಬೀಸಿ ವಿಜಯದ ಚಿನ್ಹೆ ತೋರಿಸುತ್ತಾ ಗೆಲುವಿನ ವಿಶ್ವಾಸದ ನಗೆ ಬೀರಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಪುಟ್ಟಣ್ಣ ಅನೇಕ ವರ್ಷಗಳಿಂದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ, ಚಿದಾನಂದಗೌಡರು ಕೂಡ ಒಳ್ಳೆಯ ಅಭ್ಯರ್ಥಿ, ಬಿಜೆಪಿ ಪರ ರಾಜ್ಯದಲ್ಲಿ ವಿದ್ಯಾವಂತರು ಇದ್ದಾರೆ ಎನ್ನುವುದಕ್ಕೆ ಇದು ಸೂಕ್ತ ವೇದಿಕೆಯಾಗಿದೆ. ಶಿಕ್ಷಕರು ಮತ್ತು ಪದವೀಧರರಿಗೆ ಸ್ಪೂರ್ತಿ, ನೈತಿಕ ಬೆಂಬಲ ಹಾಗು ಪೂರಕ ವಾತಾವರಣವನ್ನು ನಮ್ಮ ಸರ್ಕಾರ ಕೊಟ್ಟಿದೆ. ಪರಿಷತ್ ಮತ್ತಷ್ಟು ಶಕ್ತಿಶಾಲಿಯಾಗಬೇಕು ಎಂದರೆ ಪುಟ್ಟಣ್ಣ, ಚಿದಾನಂದಗೌಡರ ಆಯ್ಕೆಯಾಗಬೇಕು. ಅದಕ್ಕೆ ನಾಡಿನ ಪ್ರಬುದ್ಧ ಪದವೀಧರ, ಶಿಕ್ಷಕರು ಸಹಕಾರ ಕೊಡಬೇಕು. ಈ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ತಂದುಕೊಡುವ ನಂಬಿಕೆ ನಮಗಿದೆ. ನಮ್ಮ ಅಭ್ಯರ್ತರಿಗಳ ಪರ ನಿಲ್ಲಿ ಎಂದು ಶಿಕ್ಷಕ, ಪದವೀಧರರನ್ನು ಮನವಿ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಮಾತನಾಡಿ, ಸಿಎಂ ನೇತೃತ್ವದಲ್ಲಿ ಇಂದು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಕೆ ಮಾಡಿದ್ದೇನೆ. ಪಕ್ಷದ ಮುಖಂಡರು, ನಾಯಕರು, ಕಾರ್ಯಕರ್ತರೆಲ್ಲರೂ ಶುಭ ಹಾರೈಸಿದ್ದಾರೆ. ನಾಲ್ಕೂ ಕ್ಷೇತ್ರ ಗೆಲ್ಲುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಲಿದ್ದೇವೆ. ಎಲ್ಲ ಕ್ಷೇತ್ರಗಳ ಪದವೀಧರರು ಮತ್ತು ಶಿಕ್ಷಕರ ಮನವೊಲಿಸಿ ಎಲ್ಲಾ ಕ್ಷೇತ್ರಗಳಲ್ಲಿಯೂ ಗೆಲುವು ತಂದುಕೊಡಲಿದ್ದೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಚಿದಾನಂದ ಮಾತನಾಡಿ, ನಾಲ್ಕೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತವಾಗಿದೆ, ಹೆಚ್ಚಿನ ಬಹುಮತದೊಂದಿಗೆ ಸಿಎಂಗೆ ಈ ನಾಲ್ಕು ಸ್ಥಾನ ಕೊಡಲಿದ್ದೇವೆ,ಬಂಡಾಯ ಅಭ್ಯರ್ಥಿ ಕಣದಲ್ಲಿದ್ದಾರೆ, ಇನ್ನು ಸಮಯ ಇದೆ ಪಕ್ಷದ ನಾಯಕರು ಈ ಬಗ್ಗೆ ನಿರ್ಧಾರ ಮಾಡಲಿದ್ದಾರೆ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಂಡಾಯವೆದ್ದಿದೆ. ಪಕ್ಷೇತರವಾಗಿ ಕಣಕ್ಕಿಳಿದಿರುವ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಜೊತೆ ಮಾತನಾಡುತ್ತಿದ್ದೇವೆ. ಸಿಎಂ ಕೂಡ ಈ ಬಗ್ಗೆ ಮಾತನಾಡಲಿದ್ದಾರೆ. ಅವರ ಮನವೊಲಿಸುವ ಪ್ರಯತ್ನ ಮಾಡಲಿದ್ದೇವೆ. ದೊಡ್ಡ ಅಂತರದಲ್ಲಿ ನಾಲ್ಕು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.