ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸಿದರು. ಇದೇ ವೇಳೆ ಬಿಜೆಪಿ ವಿರುದ್ಧ ಹೊಸದೊಂದು ಬಾಂಬ್ ಸಿಡಿಸಿದರು.
ಉಪಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮಾತನಾಡಿದರು. ತಮ್ಮ ಪಕ್ಷದ ಅಭ್ಯರ್ಥಿ ಜವರಾಯಿಗೌಡರ ಪರ ನಿನ್ನೆಯಿಂದಲೂ ಅಬ್ಬರದ ಪ್ರಚಾರ ನಡೆಸುತ್ತಿರುವ ಹೆಚ್ಡಿಕೆ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ದಾಳಿ ನಡೆಸುತ್ತಿದ್ದಾರೆ. ಇಂದೂ ಸಹ ಬಿಜೆಪಿ ನಾಯಕರು ಮತ್ತು ಬಿಎಸ್ ವೈ ಮೇಲೆ ಮಾತಿನಲ್ಲಿಯೇ ಫೈರಿಂಗ್ ನಡೆಸಿದ ಮಾಜಿ ಸಿಎಂ ಬಿಜೆಪಿ ವಿರುದ್ಧ ಚಾಟಿ ಬೀಸಿದ್ದಾರೆ.
ಮೈತ್ರಿ ಸರ್ಕಾರ ಕಡೆವಲು ಅನರ್ಹ ಶಾಸಕರಿಗೆ ಕೋಟ್ಯಂತರ ರೂಪಾಯಿ ಕೊಟ್ಟಿದ್ದಾರೆ. ಅದಕ್ಕೆ ನೈಟ್ ಕ್ಲಬ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರಿಂದ ಹಣ ಪಡೆದು ಆ ಹಣವನ್ನೇ ಅನರ್ಹ ಶಾಸಕರಿಗೆ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ನೈಟ್ ಕ್ಲಬ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಿಲ್ಲಿಸಲು ಕ್ರಮ ಕೈಗೊಂಡಿದ್ದೆ. ಈಗ ಅದನ್ನು ಪುನರ್ ಪ್ರಾರಂಭಿಸಲು ದಂಧೆಕೋರರಿಗೆ ಸಹಾಯ ಮಾಡುವುದಾಗಿ ಬಿಜೆಪಿಯವರು ವಾಗ್ದಾನ ಮಾಡಿ, ಹಣ ವಸೂಲಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಬಿಜೆಪಿಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.