ಬೆಂಗಳೂರು :ಸಂವಿಧಾನದ 20ನೇ ಕಲಂ ಪ್ರಕಾರ, ಕಾನೂನಿನಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ತನ್ನ ಮಲಮಗಳ ಮೇಲೆ ಅತ್ಯಾಚಾರವೆಸಗಿದ್ದ ತಂದೆಗೆ ಅಧೀನ ನ್ಯಾಯಾಲಯ ನೀಡಿದ್ದ 20 ವರ್ಷಗಳ ಶಿಕ್ಷೆಯನ್ನು 10 ವರ್ಷಕ್ಕೆ ಕಡಿತಗೊಳಿಸಿ ಆದೇಶಿಸಿತು. ಬೆಂಗಳೂರು ಮೂಲದವರಾದ ಅಬ್ದುಲ್ ಖಾದರ್ ಅಲಿಯಾಸ್ ರಫೀಕ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ಸಂವಿಧಾನದ 20ನೇ ಕಲಂ ಪ್ರಕಾರ, ಘಟನೆ ನಡೆದಾಗ ಯಾವ ಕಾನೂನು ಜಾರಿಯಲ್ಲಿರುತ್ತದೋ ಅದರಲ್ಲಿ ಎಷ್ಟು ಪ್ರಮಾಣದ ಶಿಕ್ಷೆಗೆ ಅವಕಾಶವಿರುತ್ತದೋ ಅಷ್ಟೇ ಪ್ರಮಾಣದ ಶಿಕ್ಷೆ ನೀಡಬೇಕು. ಅದಕ್ಕೆ ಬದಲಾಗಿ ಹೆಚ್ಚಿನ ಶಿಕ್ಷೆ ವಿಧಿಸುವುದಕ್ಕೆ ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಘಟನೆ ನಡೆದಿರುವುದು 2015ರಲ್ಲಿ. ಆಗ ಚಾಲ್ತಿಯಲ್ಲಿದ್ದ ಕಾನೂನು ಪ್ರಕಾರ ಅಂದರೆ ಐಪಿಸಿ ಸೆಕ್ಷನ್ 376 (2) ಪ್ರಕಾರ ಶಿಕ್ಷೆ ವಿಧಿಸಬೇಕು. ಆದರೆ ವಿಚಾರಣಾ ನ್ಯಾಯಾಲಯ 2018ರ ಏಪ್ರಿಲ್ನಿಂದ ಜಾರಿಗೆ ಬಂದಿರುವ ಐಪಿಸಿ ಸೆಕ್ಷನ್ 376 (3) ಪ್ರಕಾರ 20 ವರ್ಷ ಶಿಕ್ಷೆ ನೀಡಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೀಠ ಹೇಳಿದೆ. ಐಪಿಸಿ ಸೆಕ್ಷನ್ 376 (2) ನಲ್ಲಿ ಸಂಬಂಧಿ, ಪೋಷಕರು, ಅಥವಾ ಶಿಕ್ಷಕರು ಮಹಿಳೆಯರ ವಿರುದ್ಧ ಅತ್ಯಾಚಾರವೆಸಗಿದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ. 376(3)ರಲ್ಲಿ 20 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣದ ವಾಸ್ತವಾಂಶಗಳು ಮತ್ತು ಸ್ಥಿತಿಗತಿಯನ್ನು ಗಮನಿಸಿದರೆ, ವಿಚಾರಣಾ ನ್ಯಾಯಾಲಯ ಆರೋಪಿಗೆ ವಿಧಿಸಿರುವ 20 ವರ್ಷಗಳ ಜೈಲು ಶಿಕ್ಷೆಯನ್ನು ನಿಯಮದಂತೆ 10 ವರ್ಷಕ್ಕೆ ಇಳಿಕೆ ಮಾಡಬೇಕಾಗುತ್ತದೆ ಎಂದು ಆದೇಶ ನೀಡಿರುವ ನ್ಯಾಯಾಲಯ ಆರೋಪಿಗೆ 5 ಸಾವಿರ ದಂಡ ಪಾವತಿಸಲು ಆದೇಶ ನೀಡಿದೆ. ಆರೋಪಿ 2015 ರ ಅ.13 ರಿಂದ ಜೈಲಿನಲ್ಲಿರುವ ಕಾರಣ ಅಪರಾಧ ದಂಡ ಸಂಹಿತೆ ಸೆಕ್ಷನ್ 428 ರಡಿ ಶಿಕ್ಷೆ ಮುಕ್ತಾಯಕ್ಕೆ ಮನವಿ ಮಾಡಬಹುದು ಎಂದೂ ಸಹ ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: 2018 ರ ಅ. 13 ರಂದು ಮಹಿಳೆಯೊಬ್ಬರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ತನ್ನ ಎರಡನೇ ಪತಿ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ಸಂಬಂಧಿಸಿದ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಿದ್ದರು. 2019 ರ ಸೆ. 29ರಂದು ವಿಶೇಷ ನ್ಯಾಯಾಲಯ ಆರೋಪಿ ಅತ್ಯಾಚಾರವೆಸಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಪೋಕ್ಸೋ ಕಾಯಿದೆ ಸೆಕ್ಷನ್ 6 ಹಾಗೂ ಐಪಿಸಿ ಕಾಯಿದೆ ಸೆಕ್ಷನ್ 376 (3) ಅಡಿಯಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಅದನ್ನು ಪ್ರಶ್ನಿಸಿ ಆರೋಪಿ ಮೇಲ್ಮನವಿ ಸಲ್ಲಿಸಿ, ತಮಗೆ 20 ವರ್ಷ ಶಿಕ್ಷೆ ನೀಡಲಾಗಿದೆ. ಕಾನೂನಿನಲ್ಲಿ ಇರುವುದರಿಂದ ಅಧಿಕ ಶಿಕ್ಷೆ ವಿಧಿಸಲಾಗಿದೆ. ದೂರು ದಾಖಲಿಸುವಲ್ಲಿ ವಿಳಂಬವಾಗಿದೆ. ಆದ್ದರಿಂದ ಪ್ರಕರಣ ರದ್ದು ಪಡಿಸಿದೆ ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ಮದುವೆ, ಮಕ್ಕಳಿರುವುದನ್ನು ಮರೆಮಾಚಿ 2ನೇ ಮದುವೆ; ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್