ಬೆಂಗಳೂರು: ತಂದೆ-ತಾಯಿ ಪಕ್ಕದಲ್ಲೇ, ಪುನೀತ್ ರಾಜ್‍ಕುಮಾರ್ ಅವರ ಸಮಾಧಿ ಕೆಲಸಗಳನ್ನ ಶುರು ಮಾಡಲಾಗಿದೆ.
ಕನ್ನಡ ಚಿತ್ರರಂಗದ ಕಣ್ಮಣಿ, ಅಭಿಮಾನಿಗಳ ಯುವರತ್ನ ಪುನೀತ್ ರಾಜ್‍ಕುಮಾರ್ ಅಕಾಲಿಕ ಸಾವಿನಿಂದ ಇಡೀ ಭಾರತೀಯ ಚಿತ್ರರಂಗ ದೊಡ್ಡ ಆಘಾತಕ್ಕೊಳಗಾಗಿದೆ. ನಿನ್ನೆ ರಾತ್ರಿಯಿಂದಲೇ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಪಾರ್ಥಿವ ಶರೀರ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಅಭಿಮಾನಿಗಳು ಈ ರಾಜಕುಮಾರನ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಕಂಠೀರವ ಸ್ಟುಡಿಯೋದಲ್ಲಿ ಈಗಾಗಲೇ ಅಪ್ಪು ತಾಯಿ ಪಾರ್ವತಮ್ಮ ರಾಜ್‍ಕುಮಾರ್ ಪಕ್ಕದಲ್ಲೇ ಪುನೀತ್ ರಾಜ್‍ಕುಮಾರನ ಸಮಾಧಿ ಕೆಲಸಗಳು ಶುರುವಾಗಿವೆ. ಪುನೀತ್ ರಾಜ್‍ಕುಮಾರ್ ದೊಡ್ಡ ಮಗಳು ಧೃತಿ ಬರಬೇಕಿದೆ.
ಪಾರ್ವತಮ್ಮ ರಾಜ್‍ಕುಮಾರ್ ಪಕ್ಕದಲ್ಲಿ ಅಪ್ಪು ಸಮಾಧಿ ಕಂಠೀರವ ಸ್ಟುಡಿಯೋದಲ್ಲಿಯೇ ಡಾ. ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ಇದ್ದು, ಇವರ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. ಅಂಬರೀಶ್ ಅವರ ಸಮಾಧಿ ಸಹ ಕಂಠೀರವ ಸ್ಟುಡಿಯೋದಲ್ಲಿಯೇ ಇದೆ.
ಸಾರ್ವಜನಿಕರಿಗೆ ಪ್ರವೇಶವಿಲ್ಲ:
ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನಡೆಯಲಿದ್ದು, ಅಂತ್ಯಕ್ರಿಯೆಗೆ ಗಣ್ಯರಿಗೆ, ಕುಟುಂಬಸ್ಥರಿಗೆ ಮಾತ್ರ ಈ ವೇಳೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದ್ರೆ ಎಲ್ಲರಿಗೂ ಸ್ಟೇಡಿಯಂನಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗ್ತಿದೆ ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ.
ಕಂಠೀರವ ಸ್ಟೂಡಿಯೋದಲ್ಲಿ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ನಮಗಿರುವ ಮಾಹಿತಿ ಪ್ರಕಾರ ಪುನೀತ್ ಮಗಳು ಧೃತಿಗೆ ಸ್ಪೆಷಲ್ ಫ್ಲೈಟ್ ವ್ಯವಸ್ಥೆ ಮಾಡಲು ಸಿಎಂ ಸೂಚಿಸಿದ್ದಾರೆ ಎಂದರು.
ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಹಿಂದೆ ನಡೆದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಕ್ರಮ ವಹಿಸಿದ್ದೇವೆ. ಇಲ್ಲಿ ಸಾರ್ವಜನಿಕರಿಗೆ ಅವಕಾಶವಿಲ್ಲ, ಇಲ್ಲಿ ಗಣ್ಯವ್ಯಕ್ತಿಗಳಿಗೆ ಮಾತ್ರ ಅವಕಾಶ , ಸ್ಟೇಡಿಯಂ ಹತ್ರ ಹೋಗಿ ಶಿವಣ್ಣನ ಬಳಿ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ:ಪುನೀತ್ ರಾಜ್‍ಕುಮಾರ್ ನೆನೆದ ಸ್ವಾಮೀಜಿ, ರಾಜಕಾರಣಿಗಳ ಕಂಬನಿ