ಬೆಂಗಳೂರು: ಕನ್ನಡಿಗರ ಆರಾಧ್ಯ ದೈವವಾಗಿರುವ ಹಾಗೂ ಎಲ್ಲ ಸಿನಿರಂಗದ ಪ್ರೀತಿಗೆ ಪಾತ್ರರಾಗಿದ್ದ ನಟ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ ಒಂದು ವರ್ಷವಾಗುತ್ತಿದೆ. ಅಪ್ಪುವಿನ ಡ್ರೀಮ್ ಪ್ರಾಜೆಕ್ಟ್ ಗಂಧದಗುಡಿ ಶುಕ್ರವಾರ ವಿಶ್ವಾದ್ಯಂತ ತೆರೆ ಕಂಡಿದೆ. ಸಿನಿಮಾ ನೋಡಿದ ಎಲ್ಲರೂ ವಿ ಮಿಸ್ ಯು ಅಪ್ಪು ಎನ್ನುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಚಿತ್ರ ಬಿಡುಗಡೆಯಾಗುತ್ತಿದೆ ಅಂದರೆ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕುಟುಂಬ ಸಮೇತ ಚಿತ್ರ ನೋಡುತ್ತಿದ್ದರು. ಯೂತ್ ಐಕಾನ್ ಪುನೀತ್, ನಟನೆ ಜೊತೆಗೆ ಗಾಯಕರಾಗಿಯೂ ತನ್ನದೇ ಆದ ಅಚ್ಚು ಮೂಡಿಸಿದ್ದಾರೆ. ತಮ್ಮ ಚಿತ್ರಗಳಿಗೆ ಮಾತ್ರವಲ್ಲದೇ ಬೇರೆ ಬೇರೆ ಸಿನಿಮಾಗಳಿಗೂ ಹಾಡುವ ಮೂಲಕ ಗಾಯಕರಾಗಿ ಗುರುತಿಸಿಕೊಂಡಿದ್ದರು.
1975 ರಲ್ಲಿ ರಾಜ್ ಕುಮಾರ್ ಕೊನೆಯ ಮಗನಾಗಿ ಜನಿಸಿದ್ದ ಪುನೀತ್, ಆರು ತಿಂಗಳ ಮಗು ಆಗಿರುವಾಗಲೇ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರ ಆರು ವರ್ಷದವನಾಗಿದ್ದಾಗ ಭಾಗ್ಯವಂತ ಸಿನಿಮಾದಲ್ಲಿ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡಿನಿಂದ ಹಿಡಿದು, ಇದೇ ವರ್ಷ ತೆರೆ ಕಂಡ ನಮ್ಮ ಹುಡುಗರು ಚಿತ್ರದವರೆಗೂ ಸುಮಾರು 95 ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಇದನ್ನೂ ಓದಿ:ನಗು ಮೊಗದ ಪುನೀತ್ ರಾಜಕುಮಾರನ ಬಗ್ಗೆ ನಿರ್ದೇಶಕ ಮಹೇಶ್ ಬಾಬು ಹೇಳಿದ್ದು ಹೀಗೆ..
1981ರಲ್ಲಿ ತೆರೆಕಂಡ ಭಾಗ್ಯವಂತ ಚಿತ್ರದಲ್ಲಿ ಮೊದಲ ಬಾರಿಗೆ 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ' ಹಾಗೂ 'ಅಮ್ಮ ಸೀತಮ್ಮ' ಎಂಬ ಹಾಡುಗಳನ್ನು ಹಾಡಿದ್ದರು. ಬಾನ ದಾರಿಯಲ್ಲಿ ಸಾಂಗ್ ಈಗಲೂ ಪುನೀತ್ ಹಾಡಿದ ಬೆಸ್ಟ್ ಸಾಂಗ್ಗಳಲ್ಲಿ ಒಂದಾಗಿದೆ.
ಕಾಣದಂತೆ ಮಾಯವಾದನು:ರಾಜ್ ಕುಮಾರ್ ಹಾಗೂ ಸರಿತಾ ಅಭಿನಯನದ 1982 ತೆರೆಕಂಡ ಚಲಿಸುವ ಮೋಡಗಳು ಚಿತ್ರದಲ್ಲಿ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ 'ಕಾಣದಂತೆ ಮಾಯವಾದನು ನಮ್ಮ ಶಿವ' ಹಾಡು ಇಂದಿಗೂ ಫೇಮಸ್ ಆಗಿದೆ. ಇದೇ ಹಾಡನ್ನ ಅಣ್ಣಾಬಾಂಡ್ ಚಿತ್ರದಲ್ಲಿ ರಿಮಿಕ್ಸ್ ಮಾಡಿ ಹಾಡಿದ್ದರು.
1983 ರಿಲೀಸ್ ಆದ ಎರಡು ನಕ್ಷತ್ರಗಳು ಚಿತ್ರದಲ್ಲಿ 'ನನ್ನ ಉಡುಪು ನನ್ನದು' ಸೇರಿ ಮೂರು ಹಾಡುಗಳನ್ನ ಹಾಡಿದ್ದಾರೆ.1984ರಲ್ಲಿ ಯಾರಿವನು ಚಿತ್ರದಲ್ಲಿ 'ಕಣ್ಣಿಗೆ ಕಾಣುವ ದೇವರ ಎಂದರೆ ಅಮ್ಮನು ತಾನೇ' ಹಾಡನ್ನು ಹಾಡಿ ಗಮನ ಸೆಳೆದಿದ್ದರು. ರಾಷ್ಟ್ರ ಪ್ರಶಸ್ತಿ ಪಡೆಯಲು ಕಾರಣವಾದ ಬೆಟ್ಟದ ಹೂ ಚಿತ್ರದಲ್ಲಿ 'ಮಳೆಯೇ ಬರಲಿ ಬಿಸಿಲೇ ಇರಲಿ' ಹಾಡಿಗೆ ಎಸ್ಪಿಬಿ ಜೊತೆಗೆ ಧ್ವನಿಗೂಡಿಸಿದ್ದರು.
ಇದನ್ನೂ ಓದಿ:ಹಲವು ಸಮಾಜ ಸೇವೆಗಳ ಮೂಲಕ ಹೃದಯ ವೈಶಾಲ್ಯ ಮೆರೆದಿದ್ದ ಹೃದಯವಂತ ಅಪ್ಪು
ಹೀರೋ ಆದ ಬಳಿಕ ಅಪ್ಪು ಚಿತ್ರದಲ್ಲಿ ಗಾಯನ:ಪುನೀತ್ ರಾಜ್ಕುಮಾರ್ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ಚಿತ್ರ ಅಪ್ಪು. ಗುರುಕಿರಣ್ ಸಂಗೀತ ನಿರ್ದೇಶನದ ಉಪೇಂದ್ರ ಸಾಹಿತ್ಯದಲ್ಲಿ 'ತಾಲಿಬಾನ್ ಅಲ್ಲಾ ಅಲ್ಲಾ' ಎಂಬ ಸಾಂಗ್ ಅನ್ನು ಅಪ್ಪು ಚಿತ್ರದಲ್ಲಿ ಹಾಡಿದ್ದರು.
ನಂತರ ಅಭಿ, ವೀರಕನ್ನಡಿಗ ಚಿತ್ರದಲ್ಲಿ ಕ್ರಮವಾಗಿ ಸುಮ್ನೆ-ಸುಮ್ನೆ ಓಲು ಬಿಡುವ ಸುಂದರಿ ಹಾಗೂ ನಾಯಿರೆ ನಾಯಿರೆ ಬಾಬ ಹಾಡುಗಳಿಗೆ ಧ್ವನಿಯಾಗಿದ್ದರು. ಮೌರ್ಯ, ಆಕಾಶ್, ನಮ್ಮ ಬಸವ ಚಿತ್ರಗಳಿಗೂ ಕಂಠದಾನ ಮಾಡಿದ್ದ ಅಪ್ಪು, ತಮ್ಮ ಚಿತ್ರಗಳಿಗೆ ಮಾತ್ರವಲ್ಲದೇ ಇತರೆ ಚಿತ್ರಗಳಿಗೂ ಹಾಡಿದರು. ರಿಷಿ ಹಾಗೂ ಲವಕುಶ ಚಿತ್ರಗಳಿಗೂ ಕಂಠದಾನ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ ಹಾಡಿದ ಪ್ರಮುಖ ಹಾಡುಗಳು:
- ವಂಶಿ (2008) - ಜೊತೆ ಜೊತೆಯಲಿ
- ರಾಮ್ (2009) - ಹೊಸ ಗಾನಬಜಾನ
- ಜಾಕಿ (2010) - ಎಡವಟ್ಟಾಯ್ತು ತಲೆಕೆಟ್ ಹೊಯ್ತು
- ಮೈಲಾರಿ (2010) - ಮೈಲಾಪುರ ಮೈಲಾರಿ
- ಶೈಲು (2011) - ಪದ ಪದ ಕನ್ನಡ ಪದ
- ಅಧ್ಯಕ್ಷ (2013) - ಅಧ್ಯಕ್ಷ..ಅಧ್ಯಕ್ಷ
- ಪವರ್ (2014) - ಗುರುವಾರ ಸಂಜೆ ನಾ ಹೊರಟಿದ್ದೆ ಅಲಿಯೋಕೆ
- ದೊಡ್ಮನೆ ಹುಡುಗ (2016) - ಅಭಿಮಾನಿಗಳೇ ನಮ್ಮನೇ ದೇವರು
- ರಾಂಬೋ 2 (2018) - ಎಲ್ಲಿ ಕಾಣೆ ಎಲ್ಲಿ ಕಾಣೆನೋ
- ಯುವರತ್ನ (2020) - ಊರಿಗೊಬ್ಬ ರಾಜ. ರಾಜನಿಗೊಬ್ಬ ರಾಣಿ.