ಕರ್ನಾಟಕ

karnataka

ETV Bharat / state

ಗೂಂಡಾ ಕಾಯ್ದೆ ರದ್ದು: ಜೈಲಿನಿಂದ ಪುನೀತ್ ಕೆರೆಹಳ್ಳಿ ಬಿಡುಗಡೆ - ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಬಿಡುಗಡೆಗೊಂಡಿದ್ದಾರೆ.

puneeth kerehalli released from jail
ಗೂಂಡಾ ಕಾಯ್ದೆ ರದ್ದು: ಜೈಲಿನಿಂದ ಪುನೀತ್ ಕೆರೆಹಳ್ಳಿ ಬಿಡುಗಡೆ

By ETV Bharat Karnataka Team

Published : Sep 17, 2023, 8:30 PM IST

Updated : Sep 17, 2023, 10:16 PM IST

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಗೂಂಡಾ ಕಾಯ್ದೆಯಡಿ ಬಂಧಿತರಾಗಿದ್ದ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಜೈಲಿಂದ ಬಿಡುಗಡೆಯಾಗಿದ್ದಾರೆ. ಗೂಂಡಾ ಕಾಯ್ದೆ ರದ್ದಾದ ಹಿನ್ನೆಲೆಯಲ್ಲಿ ಇಂದು ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಕಳೆದ ಆಗಸ್ಟ್ 11ರಂದು ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಗೂಂಡಾ ಕಾಯ್ದೆಗೆ ಸಂಬಂಧಿಸಿಂತೆ ರಚಿಸಲಾಗಿದ್ದ ಸಲಹಾ ಮಂಡಳಿಯು ಬಂಧಿಯನ್ನು ಬಂಧನದಲ್ಲಿ‌‌ಡಲು ಸಾಕಷ್ಟು ಕಾರಣಗಳಿಲ್ಲ ಎಂದು‌ ವರದಿ ನೀಡಿತ್ತು. ಹೀಗಾಗಿ ಪುನೀತ್ ವಿರುದ್ಧ ದಾಖಲಾಗಿದ್ದ ಗೂಂಡಾ ಕಾಯ್ದೆಯನ್ನ ರದ್ದು ಪಡಿಸಲಾಗಿದೆ.

ಚಾಮರಾಜಪೇಟೆ, ರಾಮನಗರ ಹಾಗೂ ವಿಜಯನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪುನೀತ್ ವಿರುದ್ಧ ಗಲಭೆ, ದೊಂಬಿ, ಕೊಲೆ ಬೆದರಿಕೆ ಹಾಗೂ ಹಲ್ಲೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಶೀಟ್ ತೆರೆದಿದ್ದರು.

ಇದನ್ನೂ ಓದಿ:ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ಬಂಧನ

ಈ ಹಿಂದೆ ನ್ಯಾಯಾಲಯದ ಜಾಮೀನಿನ ಮೇಲೆ ಹೊರಗಿದ್ದ ಪುನೀತ್ ಕೆರೆಹಳ್ಳಿ‌ ವಿರುದ್ಧ ಕರ್ನಾಟಕ ರಾಜ್ಯ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಸಂಘಟನೆ ಹೆಸರಿನಲ್ಲಿ ಗೋವು ವ್ಯಾಪಾರಿಗಳಿಗೆ ಬೆದರಿಕೆ, ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ಕೆಲಸ ಸೇರಿದಂತೆ ಕಳೆದ 10 ವರ್ಷಗಳಿಂದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದನ್ನು ಆಧರಿಸಿ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು.

ಗೂಂಡಾ ಕಾಯ್ದೆ ಬಗ್ಗೆ..ಗೂಂಡಾ ಕಾಯ್ದೆಯಡಿ ಬಂಧಿಸಲಾದ ವ್ಯಕ್ತಿಯನ್ನು ಇತರ ಪ್ರಕರಣಗಳಂತೆ 24 ಗಂಟೆಗಳೊಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯ ಇಲ್ಲ. ಪೊಲೀಸ್‌ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೆ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವೂ ಇಲ್ಲದೇ ನೇರವಾಗಿ ಜೈಲಿಗೆ ಕಳುಹಿಸಬಹುದು. ಗೂಂಡಾ ಕಾಯ್ದೆ ಅಡಿ ಬಂಧಿತನಾದಲ್ಲಿ ಆರೋಪಿಗೆ ಒಂದು ವರ್ಷ ಜಾಮೀನು ಸಿಗುವುದಿಲ್ಲ.

Last Updated : Sep 17, 2023, 10:16 PM IST

ABOUT THE AUTHOR

...view details