ಬೆಂಗಳೂರು:ಪಿಯುಸಿ ಫಲಿತಾಂಶ ವಿಚಾರ ಇನ್ನೂ ಬಗೆಹರಿಯುತ್ತಿಲ್ಲ ಎನ್ನುವಂತಾಗಿದ್ದು, ಪರೀಕ್ಷೆ ಬರೆಯದೆ ಫಲಿತಾಂಶ ನೀಡುವ ಬಗ್ಗೆ ಚರ್ಚೆ ಹೆಚ್ಚಾಗುತ್ತಿದೆ. ಫಲಿತಾಂಶದ ಬಗ್ಗೆ ಶಿಕ್ಷಣ ಇಲಾಖೆಗೆ ಸಲಹೆ ನೀಡಿರುವ ರುಪ್ಸಾ (ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಒಕ್ಕೂಟ) ರಾಜ್ಯದ 200ಕ್ಕೂ ಹೆಚ್ಚು ಖಾಸಗಿ ಕಾಲೇಜುಗಳ ಅಭಿಪ್ರಾಯ ಪಡೆದಿದೆ. ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಪ್ರಾಂಶುಪಾಲರ ಜೊತೆ ಅಭಿಪ್ರಾಯ ಮತ್ತು ವಿಚಾರ ವಿನಿಮಯ ಮಾಡಿ ಮೂರು ಪ್ರಮುಖ ಸಲಹೆ ಹಾಗೂ ಆರು ಸವಾಲುಗಳ ಪ್ರಸ್ತಾಪ ಮಾಡಿದೆ.
ಪಿಯುಸಿ ಫಲಿತಾಂಶಕ್ಕೆ ಮೂರು ವರ್ಷಗಳ ಅಂಕ ಪರಿಗಣಿಸಿ ಎಂದಿದೆ. ಶೇ.30ರಷ್ಟು SSLC, ಶೇ.50ರಷ್ಟು ಪ್ರಥಮ ಪಿಯುಸಿ, ಶೇ.20ರಷ್ಟು ದ್ವಿತೀಯ ಪಿಯುಸಿ ಅಂಕ ಪರಿಗಣಿಸಿ. ಅಲ್ಲದೇ ಇಷ್ಟು ಪ್ರತಿಶತ ಅಂಕ ನೀಡುವ ಕುರಿತು ವಿವರಣೆ ಕೂಡ ರುಪ್ಸಾ ಸಂಘಟನೆ ನೀಡಿದೆ.
ಎಸ್ಎಸ್ಎಲ್ಸಿ ಪ್ರತಿ ವಿಷಯದ ಶೇ.30ರಷ್ಟು ಅಂಕ, ಪ್ರಥಮ ಪಿಯುಸಿ ವಿಷಯವಾರು ಶೇ.50ರಷ್ಟು ಅಂಕ ಹಾಗೂ ದ್ವೀತಿಯ ಪಿಯುಸಿಯಲ್ಲಿ ಪ್ರಾಯೋಗಿಕ ತರಗತಿ, ಮಧ್ಯ ವಾರ್ಷಿಕ ಹಾಗೂ ಜರುಗಿದ ಇತರೆ ಪರೀಕ್ಷೆಯಿಂದ ಶೇ.20ರಷ್ಟು ಅಂಕ ಪರಿಗಣಿಸಿದರೆ ಒಳ್ಳೆಯದು ಎಂದು ರುಪ್ಸಾ ಅಭಿಪ್ರಾಯಪಟ್ಟಿದೆ.