ಬೆಂಗಳೂರು:ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಆರಂಭವಾದ ಹಿಜಾಬ್ - ಕೇಸರಿ ಶಾಲು ಸಂಘರ್ಷ, ಶಾಲಾ - ಕಾಲೇಜುಗಳಿಂದ ಶುರುವಾಗಿ ಸದ್ಯ ಹೈಕೋರ್ಟ್ ಅಂಗಳಕ್ಕೆ ತಲುಪಿದೆ. ವಿವಾದದ ಸಂಘರ್ಷವನ್ನ ನಿಯಂತ್ರಿಸಲು ಸರ್ಕಾರವೂ ಸಾರ್ವತ್ರಿಕ ರಜೆ ಘೋಷಣೆ ಮಾಡಿತ್ತು. ಫೆಬ್ರವರಿ 14 ರಂದು ಮೊದಲ ಹಂತವಾಗಿ 9-10ನೇ ತರಗತಿಯನ್ನ ಆರಂಭಿಸಲಾಗಿತ್ತು. ಇದೀಗ ನಾಳೆಯಿಂದ ಪಿಯುಸಿ ಹಾಗೂ ಪದವಿ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಲಿವೆ.
ಅಂದಹಾಗೇ, ಉಡುಪಿಯ ಒಂದು ಶಾಲೆಯಲ್ಲಿ ಶುರುವಾದ ಹಿಜಾಬ್ ಗಲಾಟೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿದೆ. ಆದರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾತ್ರ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ. ನಗರದಲ್ಲಿರುವ ಶಾಲೆಗಳಲ್ಲಿ ಯಾವುದೇ ಗಲಾಟೆ ಗದ್ದಲ ಇಲ್ಲದೆ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು 1 ರಿಂದ 10ನೇ ತರಗತಿಯ ಶಾಲೆಗಳು ನಡೆಯುತ್ತಿವೆ.
ಚಂದ್ರಲೇಔಟ್, ವಿದ್ಯಾ ಸಾಗರ್ ಶಾಲೆಯಲ್ಲಿ ಹಿಜಾಬ್ ಗಲಾಟೆ ಅಂತಾ ಸುದ್ದಿಯಾಗಿತ್ತು. ಆದರೆ, ಇದರ ಬಗ್ಗೆ ಮಾಹಿತಿ ನೀಡಿರುವ ಶಿಕ್ಷಣ ಸಚಿವ ನಾಗೇಶ್, ಹಿಜಾಬ್ ಗಲಾಟೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾರೋ ಕಿಡಿಗೇಡಿಗಳು ಇದನ್ನ ಸೃಷ್ಟಿ ಮಾಡಿದ್ದು, ಈ ವಿಚಾರವನ್ನು ಒಂದಷ್ಟು ಜನ ದುರುಪಯೋಗ ಪಡಿಸಿಕೊಂಡಿದ್ದಾರೆ ಅಂತಾ ತಿಳಿಸಿದರು.