ಬೆಂಗಳೂರು: ಕೋವಿಡ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಚಿಕಿತ್ಸಾ ದರದ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆ ನಿರ್ದೇಶಿಸಿರುವ ಹೈಕೋರ್ಟ್, ಸಾಧ್ಯವಾದರೆ ಈ ಕುರಿತು ಸಾರಿಗೆ ಸಂಸ್ಥೆಯ ಬಸ್ಗಳ ಮೇಲೆ ದರ ಪಟ್ಟಿ ಪ್ರಕಟಿಸುವಂತೆ ಸಲಹೆ ನೀಡಿದೆ.
ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇಂದು ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಅಧಿಕ ದರ ವಿಧಿಸಲಾಗುತ್ತಿದೆ. ತಿಳುವಳಿಕೆ ಕೊರತೆಯಿಂದಾಗಿ ಜನರೂ ಕೇಳಿದಷ್ಟು ಪಾವತಿಸುತ್ತಿದ್ದಾರೆ ಎಂದು ಆರೋಪಿಸಿದರು.