ಬೆಂಗಳೂರು: ಬಹುನಿರೀಕ್ಷಿತ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯನ್ನು ಸರ್ಕಾರ ಪ್ರಕಟಿಸಿದ್ದು, ಆ ಮೂಲಕ ಶಿಕ್ಷಕರಿಗೆ ಸರ್ಕಾರ ದೀಪಾವಳಿ ಕೊಡುಗೆ ನೀಡಿದೆ.
ಬಹುನಿರೀಕ್ಷಿತ ವರ್ಗಾವಣೆ ವೇಳಾಪಟ್ಟಿ ಪ್ರಕಟ 2019-20ರಲ್ಲಿ ಕಡ್ಡಾಯ, ಹೆಚ್ಚುವರಿಯಾಗಿ ತಾಲೂಕಿನಿಂದ, ಜಿಲ್ಲೆಯಿಂದ ಹೊರಗಡೆ ವರ್ಗಾವಣೆಯಾಗಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಒಳಗೆ ಲಭ್ಯವಿರುವ ಖಾಲಿ ಹುದ್ದೆಗಳಿಗೆ, ಅವರು ಬಯಸುವ ಅಕ್ಕಪಕ್ಕದ ತಾಲೂಕುಗಳಲ್ಲಿ ಲಭ್ಯವಿರುವ ಹುದ್ದೆಗಳಿಗೆ ಪ್ರಸ್ತುತ ಸಾಲಿಗೆ ಸೀಮಿತವಾಗಿ ವರ್ಗಾವಣೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.
2019-20ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮಗಳು 2017ರ ಶಿಕ್ಷಕರ ವರ್ಗಾವಣೆ ಕಾಯ್ದೆಯಡಿ ಕೆಲ ಶಿಕ್ಷಕರು ತಾಲೂಕು, ಜಿಲ್ಲೆಗಳಿಂದ ಹೊರಗಡೆ ವರ್ಗಾವಣೆಯಾಗಿದ್ದಾರೆ. ಅಂತಹ ಶಿಕ್ಷಕರಿಗೆ ಆಗಿರುವ ಅನಾನುಕೂಲವನ್ನು ಸರಿಪಡಿಸುವ ನಿಟ್ಟಿನಲ್ಲಿ ಹೊಸ ವರ್ಗಾವಣೆ ಕಾಯ್ದೆ ಅನುಸಾರ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಈ ಬಾರಿ ಕಳೆದ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣಾ ಶಿಕ್ಷೆಗೊಳಗಾದ ಶಿಕ್ಷಕರಿಗೆ ಮೊದಲ ಆದ್ಯತೆಯ ವರ್ಗಾವಣೆ ಇರಲಿದೆ ಎಂದಿದ್ದಾರೆ. ವರ್ಗಾವಣಾ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಇದೇ ತಿಂಗಳ 17ರಿಂದ ಪ್ರಕ್ರಿಯೆ ಪ್ರಾರಂಭವಾಗಲಿದೆ. ಶಿಕ್ಷಕ ಮಿತ್ರ ಮೊಬೈಲ್ ಆ್ಯಪ್ ಮೂಲಕ ವರ್ಗಾವಣಾ ಪ್ರಕ್ರಿಯೆ ನಿರ್ವಹಣೆಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಕಳೆದ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ಶಿಕ್ಷಕ, ಶಿಕ್ಷಣ ಸ್ನೇಹಿಯಾದ ವರ್ಗಾವಣಾ ಕಾಯ್ದೆಗೆ ಉಭಯ ಸದನಗಳ ಅನುಮೋದನೆ ಪಡೆಯಲಾಗಿತ್ತು. ಇಂದು ಈ ಕಾಯ್ದೆ ಆಧರಿಸಿದ ವರ್ಗಾವಣೆಗೆ ಚಾಲನೆ ನೀಡಿದ್ದೇವೆ. ಇದು ದೀಪಾವಳಿಗೆ ಸರ್ಕಾರ ನಮ್ಮ ಶಿಕ್ಷಕ ಸಮುದಾಯಕ್ಕೆ ನೀಡುತ್ತಿರುವ ಕೊಡುಗೆ. ಶಿಕ್ಷಕರಿಗೆ ಇದು ಉಪಯೋಗವಾಗಲಿ, ನಮ್ಮ ವಿದ್ಯಾರ್ಥಿಗಳ ಒಳಿತನ್ನು ಕಾಯಲು ಇದು ಪ್ರೇರಕವಾಗಲಿ ಎಂದು ಆಶಿಸಿದ್ದಾರೆ.
ವೇಳಾಪಟ್ಟಿ ಹೀಗಿದೆ:
ನ. 17: ಕಡ್ಡಾಯ, ಹೆಚ್ಚುವರಿಯಾಗಿ ತಾಲೂಕಿನಿಂದ, ಜಿಲ್ಲೆಯಿಂದ ಹೊರಗಡೆ ವರ್ಗಾವಣೆಯಾಗಿರುವ ಶಿಕ್ಷಕರ ಪಟ್ಟಿ ಪ್ರಕಟ
ನ. 20-23: ಶಿಕ್ಷಕರ ಆಕ್ಷೇಪಣೆಯನ್ನು ಪರಿಶೀಲಿಸಿ ಅಂತಿಮಗೊಳಿಸುವುದು
ನ. 24-30: ಪಟ್ಟಿಯಲ್ಲಿ ಪ್ರಕಟವಾದ ಆಸಕ್ತ ಶಿಕ್ಷಕರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು
ಡಿ. 1-5: ತಂತ್ರಾಂಶದಲ್ಲಿ ಅರ್ಜಿಗಳನ್ನು ಅಂತಿಮಗೊಳಿಸುವುದು
ಡಿ. 14: ಅಂತಿಮ ಕೌನ್ಸೆಲಿಂಗ್ ಅರ್ಹತಾ ಪಟ್ಟಿ ಪ್ರಕಟ
ಡಿ. 16-17: ಕೌನ್ಸೆಲಿಂಗ್ ಪ್ರಕ್ರಿಯೆ (ಪ್ರಾಥಮಿಕ)
ಡಿ. 18-19: ಕೌನ್ಸೆಲಿಂಗ್ ಪ್ರಕ್ರಿಯೆ (ಪ್ರೌಢ)