ಬೆಂಗಳೂರು:ಉದ್ಯಾನ ನಗರಿಯಲ್ಲಿ ಮಳೆಯಿಂದಾಗಿ ರಸ್ತೆ ಹೊಂಡಗಳು ಜನರ ಪಾಲಿಗೆ ಮೃತ್ಯು ಗುಂಡಿಗಳಾಗಿ ಪರಿಣಮಿಸುತ್ತಿವೆ. ಇದರಿಂದ ಬಿಬಿಎಂಪಿ, ರಾಜ್ಯ ಸರ್ಕಾರ ಮುಕ್ತಿ ನೀಡುವುದು ಯಾವಾಗ ಎಂದು ವಾಹನ ಸವಾರರು ಪ್ರಶ್ನೆ ಮಾಡುತ್ತಿದ್ದಾರೆ.
ಗುಂಡಿ ತಪ್ಪಿಸಲು ಹೋಗಿ ಬೆಂಗಳೂರು ನಗರದಲ್ಲಿಯೇ ಹಲವು ದ್ವಿಚಕ್ರ ವಾಹನ ಸವಾರರು ದಾರುಣವಾಗಿ ಬಲಿಯಾಗುತ್ತಿದ್ದಾರೆ. ಆದರೂ, ಬಿಬಿಎಂಪಿ ಸೂಕ್ತ ಕ್ರಮಕ್ಕೆ ಮುಂದಾಗದೆ ಮಳೆಯ ನೆಪ ಹೇಳುತ್ತಿದೆ ಎಂದು ವಾಹನ ಸವಾರ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ದ್ವಿಚಕ್ರ ವಾಹನ ಸವಾರರು, ಕಳಪೆ ಡಾಂಬರೀಕರಣದಿಂದ ಸಣ್ಣ ಮಳೆಗೇ ರಸ್ತೆಗಳು ಗುಂಡಿ ಬಿದ್ದು ಹಾಳಾಗುತ್ತಿವೆ. ಮತ್ತೆ ಕೆಲವು ಕಡೆ ನಾನಾ ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ಗೊತ್ತು ಗುರಿ ಇಲ್ಲದೆ ರಸ್ತೆಗಳನ್ನು ಪದೇಪದೆ ಅಗೆಯಲಾಗುತ್ತಿದೆ. ಇದರಿಂದ ಹೆಚ್ಚಿನ ತೊಂದರೆ ಉಂಟಾಗಿದೆ ಎಂದಿದ್ದಾರೆ.
ಯಾವ ಯಾವ ಅಭಿವೃದ್ಧಿ ಕಾಮಗಾರಿ:ಸಿಲಿಕಾನ್ ಸಿಟಿ ಸೇರಿದಂತೆ ನಗರ ಪ್ರದೇಶಗಳಲ್ಲಿ ಸ್ಮಾರ್ಟ್‌ಸಿಟಿ, ವೈಟ್‌ಟಾಪಿಂಗ್, ಟೆಂಡರ್ ಶ್ಯೂರ್, ರಸ್ತೆ ವಿಸ್ತರಣೆ, ಫುಟ್‌ಪಾತ್ ಅಭಿವೃದ್ಧಿ, ನೆಲದಡಿ ವಿದ್ಯುತ್ ಕೇಬಲ್ ಅಳವಡಿಕೆ, ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ ನೆಪದಲ್ಲಿ ರಸ್ತೆಗಳನ್ನು ಯದ್ವಾತದ್ವಾ ಅಗೆಯಲಾಗುತ್ತಿದೆ. ಕೆಲಸ ಮುಗಿದ ನಂತರ ಮರು ಡಾಂಬರೀಕರಣ ಮಾಡದೇ ವರ್ಷಾನುಗಟ್ಟಲೆ ಹಾಗೆಯೇ ಬಿಡಲಾಗುತ್ತಿದೆ. ಹಾಗಾಗಿ ಜನ ಪ್ರಾಣಾಪಾಯದ ಸ್ಥಿತಿಯಲ್ಲಿ ರಸ್ತೆಯಲ್ಲಿ ಸಂಚರಿಸುವಂತಾಗಿದೆ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.