ಬೆಂಗಳೂರು :ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ಗೆ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಬಹಿರಂಗ ಪ್ರಚಾರ ನಾಳೆ ಸಂಜೆ 6 ಗಂಟೆಗೆ (ಭಾನುವಾರ) ಅಂತ್ಯವಾಗಲಿದ್ದು, ಕ್ಷೇತ್ರಗಳಿಗೆ ಸಂಬಂಧಪಡದವರು ಹೊರ ಹೋಗಬೇಕೆಂದು ಚುನಾವಣಾ ಆಯೋಗ ಸೂಚನೆ ನೀಡಿದೆ.
ಬಹಿರಂಗ ಪ್ರಚಾರದ ಅವಧಿ ಮುಕ್ತಾಯವಾದ ಬಳಿಕ ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಕಾರ್ಯಕರ್ತರು ಸೇರಿದಂತೆ ಯಾರೊಬ್ಬರು ಬಹಿರಂಗ ಪ್ರಚಾರ ಕೈಗೊಳ್ಳುವಂತಿಲ್ಲ. ಸೋಮವಾರ ಅಭ್ಯರ್ಥಿಗಳು ಅಂತಿಮ ಕಸರತ್ತು ನಡೆಸಲಿದ್ದು, ಮನೆ ಮನೆಗೆ ತೆರಳಿ ಮತಯಾಚಿಸಲಿದ್ದಾರೆ. ಭಾನುವಾರ ಸಂಜೆ 6 ಗಂಟೆಯ ಬಳಿಕ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳು, ರಾಜಕೀಯ ಕಾರ್ಯಕರ್ತರು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಮತದಾರರಲ್ಲದವರು ಕ್ಷೇತ್ರವನ್ನು ಬಿಟ್ಟು ಹೋಗಬೇಕು ಎಂದು ಆಯೋಗ ನಿರ್ದೇಶನ ನೀಡಿದೆ.
ಒಂದು ವೇಳೆ ಬಹಿರಂಗ ಪ್ರಚಾರದ ಅವಧಿ ಮುಗಿದ ಬಳಿಕ ಯಾವುದೇ ಪಕ್ಷಗಳ ವ್ಯಕ್ತಿಗಳು ಕ್ಷೇತ್ರದಲ್ಲಿ ಉಳಿದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಬಹಿರಂಗ ಪ್ರಚಾರ ಕೈಗೊಂಡರೆ 2 ವರ್ಷಗಳ ಶಿಕ್ಷೆ ಅಥವಾ ದಂಡ ಅಥವಾ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಬಹಿರಂಗ ಚುನಾವಣೆ ಮುಕ್ತಾಯಗೊಂಡ ನಂತರ ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಕ್ಷೇತ್ರದಲ್ಲಿ ಸಂಚಾರ ನಡೆಸಿ ತಪಾಸಣೆ ನಡೆಸಲಿದ್ದಾರೆ.
ಹೋಟೆಲ್, ಕಲ್ಯಾಣ ಮಂಟಪ ಸೇರಿದಂತೆ ಅನುಮಾನಸ್ಪದ ಪ್ರದೇಶಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಒಂದು ವೇಳೆ ಕ್ಷೇತ್ರದಲ್ಲಿ ಮತದಾರರಲ್ಲದವರು ಕಂಡು ಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಯಾವ ಕಾರ್ಯಗಳನ್ನು ಮಾಡಿಕೊಡಲಾಗುವುದು ಎಂಬ ಅಶ್ವಾಸನೆ ನೀಡಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುವರು. ಈ ವೇಳೆ ಯಾವುದೇ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ. ಮತದಾನ ನಡೆಯುವ 48 ಗಂಟೆ ಮೊದಲು ಕ್ಷೇತ್ರವು ಶಾಂತಿಯುತವಾಗಿ ನಿಶಬ್ದದಿಂದ ಕೂಡಿರಬೇಕು. ಹೀಗಾಗಿ ಯಾವುದೇ ಧ್ವನಿವರ್ಧಕ ಬಳಸುವಂತಿಲ್ಲ. ಒಂದು ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ.