ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):ಸಾರ್ವಜನಿಕ ಲೆಕ್ಕಪತ್ರ ಸಮಿತಿ ವತಿಯಿಂದ ಮೂರು ರಾಜ್ಯಗಳ ಭೇಟಿ ಹಿನ್ನೆಲೆಯಲ್ಲಿ ಮಾಜಿ ಸಚಿವ ಆರ್.ಅಶೋಕ್ ಅವರು ಅಸ್ಸಾಂನ ಗುವಾಹಟಿಗೆ ಪ್ರಯಾಣಿಸಿದ್ದಾರೆ. ಇಂದು ಬೆಳಿಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಲಿಲ್ಲ.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ವತಿಯಿಂದ ಮೂರು ರಾಜ್ಯಗಳ ಭೇಟಿಗೆ ತೀರ್ಮಾನ ಮಾಡಲಾಗಿದೆ. ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಹಾಗೂ ಮೇಘಾಲಯಕ್ಕೆ ಹೋಗಲಿದ್ದೇವೆ. ಅಲ್ಲಿನ ವ್ಯವಸ್ಥೆಗಳನ್ನು ಅಧ್ಯಯನ ಮಾಡುತ್ತೇವೆ. ಸಮಿತಿಯಲ್ಲಿರುವ ಎಲ್ಲಾ ಪಕ್ಷದ ನಾಯಕರು ಗುವಾಹಟಿಗೆ ಹೊರಟಿದ್ದೇವೆ. ನವೆಂಬರ್ 8ನೇ ತಾರೀಕು ವಾಪಸ್ ಆಗುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಉರುಳಿಸುವ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿ, ಜೆಡಿಎಸ್ 19 ಶಾಸಕರಿರುವ ಸಣ್ಣ ಪಕ್ಷ. ಸರ್ಕಾರ ಉರುಳಿಸುವ ಶಕ್ತಿ ನಮಗೆ ಎಲ್ಲಿದೆ?. ದುಬೈನಲ್ಲಿ ಕುಳಿತು ಸರ್ಕಾರ ಬೀಳಿಸುವ ಶಕ್ತಿ ನಮ್ಮ ಪಕ್ಷಕ್ಕಿಲ್ಲ. ಸರ್ಕಾರವನ್ನು ನಾವ್ಯಾರೂ ಉರುಳಿಸುವ ಕೆಲಸ ಮಾಡಬೇಕಿಲ್ಲ. ಈಗಾಗಲೇ ಕಾಂಗ್ರೆಸ್ ನಾಯಕರು ಯಾವ ರೀತಿ ಮಾತನಾಡುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರವನ್ನು ಕಾಂಗ್ರೆಸ್ನವರೇ ಉರುಳಿಸುತ್ತಾರೆ. ನಾವ್ಯಾರು ಬೇಕಿಲ್ಲ ಎಂದರು.