ಕರ್ನಾಟಕ

karnataka

ETV Bharat / state

ಕೋವಿಡ್ ಸಂದರ್ಭ ಸಾವಿನ ಲೆಕ್ಕ ಕೇಳಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ಧಾರ! - ramalingareddy

ಮಾಹಿತಿ ಪ್ರಕಾರ ಒಂದೊಂದು ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 500 ರಿಂದ 600 ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಸರ್ಕಾರಿ ದಾಖಲೆಯಲ್ಲಿ 150ರಿಂದ 200 ಮಾತ್ರ ಸಾವನ್ನು ತೋರಿಸಲಾಗಿದೆ. ಕೇವಲ ಸರ್ಕಾರಿ ಆಸ್ಪತ್ರೆ ಒಂದರಲ್ಲೇ ನಾಲ್ಕರಿಂದ ಐದು ಪಟ್ಟು ಸಾವಿನ ಸಂಖ್ಯೆ ಹೆಚ್ಚಿದೆ. ನಾವು ತಾಲೂಕು ಆರೋಗ್ಯ ಕೇಂದ್ರಗಳು ಹಾಗೂ ಮನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಪರಿಗಣಿಸಿಲ್ಲ. ಬೇರೆ ರಾಜ್ಯಗಳ ದೊಡ್ಡ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನೂ ತೆಕ್ಕಕ್ಕೆ ಪಡೆದಿಲ್ಲ..

ಸಾರ್ವಜನಿಕ ಲೆಕ್ಕಪತ್ರ ಸಮಿತಿ
ಸಾರ್ವಜನಿಕ ಲೆಕ್ಕಪತ್ರ ಸಮಿತಿ

By

Published : Jun 29, 2021, 5:25 PM IST

ಬೆಂಗಳೂರು :ಕೋವಿಡ್ ಎರಡನೇ ಅಲೆ ಸಂದರ್ಭ ಆಗಿರುವ ಸಾವಿನ ಲೆಕ್ಕ ಕೇಳಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ಧರಿಸಿದೆ. ವಿಧಾನಸೌಧದಲ್ಲಿ ಇಂದು ಅಧ್ಯಕ್ಷ ರಾಮಲಿಂಗರೆಡ್ಡಿ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.

ಇನ್ನು, ಸಭೆಯ ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ, ಸಾರ್ವಜನಿಕ ಖಾತೆಗಳ ಸಮಿತಿಯಲ್ಲಿ ಕೋವಿಡ್​ನಿಂದ ಸಾವಿಗೀಡಾದವರ ಸಂಖ್ಯೆಯ ಸಂಬಂಧ ಅನುಮಾನ ವ್ಯಕ್ತವಾಗಿತ್ತು. ಆರೋಗ್ಯ ಇಲಾಖೆ ಸಮರ್ಪಕ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದು ಆಡಿಟ್ ಸಂದರ್ಭ ವಿರೋಧ ವ್ಯಕ್ತವಾಗಿತ್ತು. ಅದನ್ನ ಲೆಕ್ಕಪತ್ರ ಸಮಿತಿಯಲ್ಲಿ ಪರಿಶೋಧನೆ ಮಾಡಲಾಗಿದೆ. ಸಮರ್ಪಕವಾದ ದಾಖಲೆಗಳು ನೀಡಿದರೆ ಪ್ರಕರಣ ಬಿಡುತ್ತೇವೆ. ಇಲ್ಲವಾದರೆ ಮುಂದಿನ ತನಿಖೆ ನಡೆಸುತ್ತೇವೆ. ಇಂದು ಸಭೆಗೆ ಆಗಮಿಸಿದ್ದ ಸದಸ್ಯರ ಜೊತೆ 2ನೇ ಹಾಗೂ 3ನೇ ಅಲೆಯ ವಿಚಾರವೂ ಚರ್ಚೆ ಆಯ್ತು. ಮುಂದಿನ ವಾರ ಇಲ್ಲವೇ 15 ದಿನಗಳ ನಂತರ ಮತ್ತೆ ಸಭೆ ನಡೆಯಲಿದೆ. ಸಾವಿನ ಆಡಿಟ್ ಬಗ್ಗೆ ಪ್ರಸ್ತಾಪ ಆಗಿದೆ ಎಂದರು.

ರಾಜ್ಯ ಸರ್ಕಾರ ಕೇವಲ 50 ಸಾವಿರದಷ್ಟು ಸಾವಾಗಿದೆ ಎಂಬ ಮಾಹಿತಿ ನೀಡಿದೆ. ಆದರೆ, ಮೂಲಗಳು ಮೂರು ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದೆ. ಇದಕ್ಕೆ ಸಮಿತಿಯ ಸ್ಪಷ್ಟನೆ ಏನು ಎಂದು ಕೇಳಿದ್ದಕ್ಕೆ ಸಮಿತಿ ಸದಸ್ಯರಾದ ಈಶ್ವರ್ ಖಂಡ್ರೆ ಸಹ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಮುಂದಿನ ಸಭೆಯ ಒಳಗೆ ಎಲ್ಲಕ್ಕೂ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದರು.

ಸಾವಿನ ಲೆಕ್ಕ :ಲೆಕ್ಕ ಪತ್ರ ಸಮಿತಿ ಸದಸ್ಯ ಈಶ್ವರ ಖಂಡ್ರೆ ಮಾತನಾಡಿ, ಕೋವಿಡ್ ಸಾವಿನ ಲೆಕ್ಕ ನೀಡುವಂತೆ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಮುಂದಿನ ಸಭೆಯ ವೇಳೆಗೆ ಸಂಪೂರ್ಣ ಲೆಕ್ಕ ನೀಡುವಂತೆ ಒತ್ತಾಯಿಸಿದ್ದೇನೆ. ನನಗೆ ಇರುವ ಮಾಹಿತಿ ಪ್ರಕಾರ ಒಂದೊಂದು ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 500 ರಿಂದ 600 ಮಂದಿ ಸಾವನ್ನಪ್ಪಿದ್ದಾರೆ.

ಆದರೆ, ಸರ್ಕಾರಿ ದಾಖಲೆಯಲ್ಲಿ 150ರಿಂದ 200 ಮಾತ್ರ ಸಾವನ್ನು ತೋರಿಸಲಾಗಿದೆ. ಕೇವಲ ಸರ್ಕಾರಿ ಆಸ್ಪತ್ರೆ ಒಂದರಲ್ಲೇ ನಾಲ್ಕರಿಂದ ಐದು ಪಟ್ಟು ಸಾವಿನ ಸಂಖ್ಯೆ ಹೆಚ್ಚಿದೆ. ನಾವು ತಾಲೂಕು ಆರೋಗ್ಯ ಕೇಂದ್ರಗಳು ಹಾಗೂ ಮನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ಪರಿಗಣಿಸಿಲ್ಲ. ಬೇರೆ ರಾಜ್ಯಗಳ ದೊಡ್ಡ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ಪರಿಗಣಿಸಿಲ್ಲ.

ಕೇವಲ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟವರ ಸಂಖ್ಯೆ ಸುಳ್ಳು ಹಾಗೂ ಕಳ್ಳ ಲೆಕ್ಕವನ್ನು ನೀಡಲಾಗಿದೆ. ಮುಂಬರುವ ಸಭೆಯಲ್ಲಿ ಸರ್ಕಾರ ಇದಕ್ಕೆ ಸೂಕ್ತ ಉತ್ತರ ದೊರಕಿಸುವಂತೆ ಒತ್ತಾಯಿಸಿದ್ದೇನೆ. ಸಮಿತಿ ವತಿಯಿಂದಲೂ ಸರ್ಕಾರಕ್ಕೆ ಇದೆ ಸೂಚನೆ ರವಾನೆಯಾಗಿದೆ ಎಂದರು.

ಕಳಪೆ ಮಟ್ಟದ ಔಷಧಿ :ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಕಳಪೆ ಗುಣಮಟ್ಟದ ಔಷಧಿಗಳನ್ನು ಪೂರೈಕೆ ಮಾಡಲಾಗಿದೆ. ಪೂರೈಸಿದ ಕಂಪನಿಯನ್ನು ಬ್ಲಾಕ್ ಲಿಸ್ಟ್‌ಗೆ ಒಳಪಡಿಸಬೇಕಿತ್ತು. ನಿಯಮದ ಪ್ರಕಾರ 16 ಕಂಪನಿಯನ್ನು ಕಪ್ಪುಪಟ್ಟಿಗೆ ಒಳಪಡಿಸಬೇಕಿತ್ತು. ಆದರೆ, ಕೇವಲ ಎರಡು ಕಂಪನಿಯನ್ನ ಮಾತ್ರ ಒಳಪಡಿಸಲಾಗಿದೆ. ಇಂತಹ ತಾರತಮ್ಯ ಯಾಕೆ? ಕಳಪೆ ಔಷಧ ವಿತರಿಸಿದ ಎಲ್ಲರ ವಿರುದ್ಧವೂ ಕ್ರಮ ಆಗಲೇಬೇಕು. ಇವರಿಂದ ಆಗಿರುವ ನಷ್ಟದ ವಸೂಲಾತಿ ಮಾಡಬೇಕು ಎಂದು ಸಮಿತಿ ಸಭೆಯಲ್ಲಿ ಒತ್ತಾಯಿಸಿದ್ದೇನೆ. ಈ ಕಾರ್ಯ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಚರ್ಚೆಯಾಗಿದೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ವರದಿ ನೀಡುವುದಾಗಿ ಅಪರ ಮುಖ್ಯ ಕಾರ್ಯದರ್ಶಿಗಳು ಭರವಸೆ ನೀಡಿದ್ದಾರೆ ಎಂದರು.

ಪಕ್ಷದ ಇಮೇಜ್​ಗೆ ಧಕ್ಕೆ ಆಗಿದೆ :ಕಾಂಗ್ರೆಸ್ ಪಕ್ಷದ ಮುಂದಿನ ಸಿಎಂ ಹೇಳಿಕೆ ವಿಚಾರವಾಗಿ ಉಂಟಾದ ಗೊಂದಲದ ಕುರಿತು ಕೇಳಿದ ಪ್ರಶ್ನೆಗೆ, 3 ಜನ ಕುಳಿತು ಸಭೆ ಮಾಡಿದ ಮಾತ್ರಕ್ಕೆ ಭಿನ್ನ ಮತ ಅಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಮಾಧ್ಯಮಗಳಿಗೆ ಕೇವಲ ಬಿಜೆಪಿ ಬಗ್ಗೆ ಹೇಳಿ ಬೇಸರವಾಗಿತ್ತು. ಬದಲಾವಣೆ ಬಯಸಿ ನೀವು ನಮ್ಮನ್ನ ಪ್ರಸ್ತಾಪಿಸಿದ್ದೀರಿ. ಇನ್ನೂ, ಸಮಯವಿದೆ. ಹೈಕಮಾಂಡ್ ಯಾರು ಸಿಎಂ ಆಗಬೇಕು ಎಂದು ನಿರ್ಧಾರ ಮಾಡ್ತಾರೆ. ಮೊದಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಯಾರೂ ಸಿಎಂ ವಿಚಾರದ ಬಗ್ಗೆ ಚರ್ಚೆ ಮಾಡಬಾರದೆಂದು ಹೈಕಮಾಂಡ್​ ಸೂಚನೆ ಕೊಟ್ಟಿದೆ ಎಂದು ಹೇಳಿದರು.

ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಪ್ರಸ್ತಾಪದಿಂದಾಗಿ ಪಕ್ಷದ ಇಮೇಜಿಗೆ ಧಕ್ಕೆ ಆಗಿದೆ. ಇದೀಗ ಪಕ್ಷದ ಹೈಕಮಾಂಡ್ ಗಂಭೀರವಾಗಿ ವಿಚಾರವನ್ನ ಪರಿಗಣಿಸಿ ಸೂಚನೆ ನೀಡಿದೆ. ಯಾರೂ ಅಂತಹ ಹೇಳಿಕೆ ನೀಡಬಾರದು ಎಂದು ತಿಳಿಸಿದ್ದು, ಎಲ್ಲರೂ ಅದನ್ನು ಪಾಲಿಸಲಿದ್ದಾರೆ. ಮುಂದೆ ಈ ರೀತಿ ಆಗುವುದಿಲ್ಲ ಎಂದರು.

ABOUT THE AUTHOR

...view details