ಬೆಂಗಳೂರು: ಸುಮಾರು 15,000 ಕೋವಿಡ್ ರಿಸಲ್ಟ್ ಬರುವುದು ಬಾಕಿ ಇರುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ ನಡೆಸಿ, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕೋವಿಡ್ ನಿಯಂತ್ರಣ ಸಂಬಂಧ ತೆಗೆದುಕೊಂಡಿರುವ ಕ್ರಮ, ಖರ್ಚು-ವೆಚ್ಚಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 15,000 ಕೊರೊನಾ ಟೆಸ್ಟ್ ರಿಸಲ್ಟ್ ಬರಬೇಕಿದೆ ಎಂದು ಅಧಿಕಾರಿಗಳೇ ತಿಳಿಸಿದ್ದಾರೆ. ಅದು ಆತಂಕಕಾರಿ ವಿಚಾರವಾಗಿದೆ ಎಂದರು.
ರಾಜ್ಯದಲ್ಲಿ ಕೊರೊನಾ ವಿಚಾರದಲ್ಲಿ ಭ್ರಷ್ಟಾಚಾರ ಆಗುತ್ತಿದೆ. ಗುಣಮಟ್ಟದ ಸೇವೆಯ ಕೊರತೆ ಆಗುತ್ತಿದೆ. ಕೊರೊನಾ ಮೃತರ ಅಂತ್ಯಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ಕೋವಿಡ್ ಚಿಕಿತ್ಸೆಗೆ 500 ಕೋಟಿ ರೂ. ಸಹ ಖರ್ಚಾಗಿಲ್ಲ. ಸರ್ಕಾರ ಏನು ಮಾಡುತ್ತಿದೆ. ಹಣಕಾಸು ವೆಚ್ಚ ಯಾವ ರೀತಿ ಮಾಡುತ್ತಿದೆ. ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಇದೆ. ಈಗ ಹಾಸಿಗೆಗಳ ವ್ಯವಸ್ಥೆ ಮಾಡಲು ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು.
ಜನರಿಗಾಗಿ ಪ್ರತಿಭಟನೆ ಮಾಡಿದ್ದೇವೆ: ತೈಲ ದರ ಏರಿಕೆ ಪ್ರತಿಭಟನೆ ಸಂಬಂಧ ಕಾಂಗ್ರೆಸ್ ವಿರುದ್ಧ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ನಾವು ನಮಗಾಗಿ ಪ್ರತಿಭಟನೆ ಮಾಡಲಿಲ್ಲ. ಜನರಿಗಾಗಿ ನಾವು ಪ್ರತಿಭಟನೆ ಮಾಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕಿದೆ. ದೂರು ಕೊಟ್ಟಿದ್ದರೆ ಎದುರಿಸುವ ಶಕ್ತಿ ಇದೆ. ಪ್ರತಿಭಟನೆ ವೇಳೆ ಸಣ್ಣಪುಟ್ಟ ದೋಷಗಳು ನಡೆಯುತ್ತವೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಇವೆಲ್ಲ ದೋಷ ಆಗುತ್ತವೆ. ನಾವೂ ಸಾಮಾಜಿಕ ಅಂತರ ಕಾಪಾಡಲು ಸೂಚನೆ ಕೊಟ್ಟಿದ್ದೆವು ಎಂದರು.
ಶ್ರೀರಾಮುಲು ಪ್ರತಿನಿತ್ಯ ಕಾರ್ಯಕ್ರಮ ನಡೆಸಿ ಲೋಪ ಮಾಡುತ್ತಾರೆ. ಯಾಕೆ ರಾಮುಲು ವಿರುದ್ಧ ಕ್ರಮ ತೆಗೆದುಕೊಳ್ಳಲ್ಲ ಎಂದು ಪ್ರಶ್ನಿಸಿದರು.