ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ ಬೆಂಗಳೂರು: ಹೊಸ ವರ್ಷಾಚರಣೆಗೆ ದಿನಗಣನೆ ಪ್ರಾರಂಭವಾಗಿದೆ. ಬೆಂಗಳೂರಿನ ಬ್ರಿಗೇಡ್ ರಸ್ತೆ, ಎಂ ಜಿ ರಸ್ತೆ ಸೇರಿದಂತೆ ನಗರ ನ್ಯೂಇಯರ್ ಸಂಭ್ರಮಕ್ಕೆ ಸನ್ನದ್ಧವಾಗುತ್ತಿದೆ. ಇದೇ ವೇಳೆ ಹೊಸ ವರ್ಷದ ಹರ್ಷಾಚರಣೆ ಹೇಗಿರಬೇಕು, ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತಾಗಿ ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪಬ್ ರೆಸ್ಟೋರೆಂಟ್ ಮಾಲೀಕರ ಸಭೆ ನಡೆಯಿತು.
ಕೋವಿಡ್ ಕಾರ್ಮೋಡ ಕರಗಿಹೋದ ಬಳಿಕ ಸಂತಸದಿಂದ ಹೊಸ ವರ್ಷವನ್ನು ಬರಮಾಡಿಕೊಂಡು ಸಂಭ್ರಮಿಸುವ ಕಾಲ ಸನ್ನಿಹಿತವಾಗಿದೆ. ಬ್ರಿಗೇಡ್, ಎಂಜಿ ರಸ್ತೆ, ಇಂದಿರಾನಗರ, ಚರ್ಚ್ ರಸ್ತೆಗಳಲ್ಲಿ ಗತವೈಭವ ಮರುಕಳಿಸಲಿದೆ. ಆದರೆ ಪಬ್ ಮಾಲೀಕರು ಅನುಸರಿಸಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ನಗರ ಪೊಲೀಸ್ ಆಯುಕ್ತರು ಸೇರಿದಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಸಭೆ ಸೇರಿ ಪಬ್, ರೆಸ್ಟೋರೆಂಟ್ ಮಾಲೀಕರಿಗೆ ವಿಶೇಷ ಸೂಚನೆಗಳನ್ನು ನೀಡಿದ್ದಾರೆ.
ಕ್ಲಬ್ ಮತ್ತು ಪಬ್ಗಳಿಗೆ ನಿರ್ಬಂಧ ಇರುತ್ತದೆ. ರಸ್ತೆಯಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಎಲ್ಲಾ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಲೈಟಿಂಗ್ ವ್ಯವಸ್ಥೆ ಮಾಡುತ್ತೇವೆ. ಮಧ್ಯರಾತ್ರಿ ವಿದ್ಯುದ್ದೀಪಗಳನ್ನು ಆರಿಸದಂತೆ ಸೂಚನೆ ನೀಡಲಾಗಿದೆ. ಪೊಲೀಸರ ಸೂಚನೆ ಪಾಲಿಸುತ್ತೇವೆ ಎಂದು ಬ್ರಿಗೇಡ್ ಸ್ಟೋರ್ಸ್ ಅಂಡ್ ಅಸೋಸಿಯೇಷನ್ ಕಾರ್ಯದರ್ಶಿ ಯಸೂಫ್ ಸುಹೇಲ್ ಹೇಳಿದರು.
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, ಡಿ.31ರಂದು ಹೊಸವರ್ಷಾಚರಣೆಗೆ ಸಂಬಂಧಿಸಿದಂತೆ ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಹಿಳೆಯರಿಗೆ ಭದ್ರತೆ ನೀಡಬೇಕು. ಪಬ್ ಮತ್ತು ರೆಸ್ಟೋರೆಂಟ್ ಮಾಲೀಕರು ಹೊಸ ವರ್ಷದ ಸಮಯದಲ್ಲಿ ಕೆಲವು ಕೆಲಸಗಾರರನ್ನು ನಿಯೋಜಿಸಿಕೊಳ್ಳುತ್ತಾರೆ. ಅವರ ಅಪರಾಧ ಹಿನ್ನೆಲೆ ವಿಚಾರಿಸಬೇಕು. ವಿದ್ಯುತ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂಬುದೂ ಸೇರಿದಂತೆ ಕೆಲವು ನಿಬಂಧನೆಗಳ ಬಗ್ಗೆ ಪಬ್ ಮಾಲೀಕರಿಗೆ ಸಂಘ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ:'ಕಾನೂನು ಬಾಹಿರ ಕ್ಲಬ್, ಪಬ್‌ಗಳು, ಇಸ್ಪೀಟ್ ಅಡ್ಡೆಗಳ ಮೇಲೆ ಕ್ರಮ ಕೈಗೊಳ್ಳಿ'