ಬೆಂಗಳೂರು:ಬೋಧಕರಿಗೆ ಅನುಕೂಲವಾಗುವಂತೆ, ಈ ಹಿಂದೆ ಇದ್ದ ಒಂದು ವರ್ಷದೊಳಗೆ ನೇಮಕಾತಿ ಅವಧಿಯ ಊರ್ಜಿತ್ವವನ್ನು, ನೇಮಕಾತಿ ಆಗುವವರೆಗೆ ಮುಂದುವರಿಸಲಾಗುವುದು. ಆದ್ದರಿಂದ ಬೋಧಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಸಿಎಂ ಯಡಿಯೂರಪ್ಪ ಅಭಯ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಪದವಿಪೂರ್ವ ಕಾಲೇಜು ಬೋಧಕರ ಆಯ್ಕೆ ಬಗ್ಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಮತ್ತು ಕೌನ್ಸಲಿಂಗ್ ನಡೆದು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಆದರೆ ಕೋವಿಡ್-19 ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಇನ್ನೂ ಕಾಲೇಜುಗಳು ಆರಂಭವಾಗದೆ ಇರುವುದರಿಂದ ಬೋಧಕರಿಗೆ ವರದಿ ಮಾಡಿಕೊಳ್ಳುವುದಕ್ಕೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಬೋಧಕರಿಗೆ ಅನುಕೂಲವಾಗುವಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯ ಪಿಯುಸಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಮುಗಿದು ಎರಡು ತಿಂಗಳಾದರೂ ಆಯ್ಕೆ ಪತ್ರ ನೀಡಿಲ್ಲ. ಇದರಿಂದ ಉಪನ್ಯಾಸಕ ವರ್ಗದಲ್ಲಿ ಆತಂಕ ಮೂಡಿದೆ. ಆದೇಶ ಪತ್ರ ಕೈ ಸೇರದ ಹಿನ್ನೆಲೆ ಎಲ್ಲಿ ತಮ್ಮ ಆಯ್ಕೆ ರದ್ದಾಗುತ್ತದೆಯೋ ಎಂಬ ಭಯದಲ್ಲಿ ನೂರಾರು ಅಭ್ಯರ್ಥಿಗಳು ಪಿಯುಸಿ ಮಂಡಳಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಆದೇಶ ಪತ್ರ ನೀಡಿದರೆ, ವರದಿ ಮಾಡಿಕೊಳ್ಳಲು ಅಭ್ಯರ್ಥಿಗಳು ಮುಂದಾಗುತ್ತಾರೆ. ಆದರೆ, ಈಗ ಕಾಲೇಜುಗಳು ಆರಂಭವಾಗಿಲ್ಲ. ಈ ಹಿನ್ನೆಲೆ ಅವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಆದೇಶ ಪತ್ರ ವಿಳಂಬ ಮಾಡಲಾಗಿದೆ. ನೇಮಕಾತಿ ಆದೇಶ ನೀಡಲ್ಲ ಎಂದು ಯಾವುದೇ ಕಾರಣಕ್ಕೂ ಈ ಆಯ್ಕೆ ಪ್ರಕ್ರಿಯೆಯನ್ನು ರದ್ದು ಮಾಡುವುದಿಲ್ಲ. ಮುಂದಿನ ನೇಮಕಾತಿವರೆಗೂ ಈ ನೇಮಕಾತಿಯ ಊರ್ಜಿತ್ವವನ್ನು ಮುಂದುವರೆಸಲಾಗುವುದು ಎಂದು ಸಿಎಂ ಅಭಯ ನೀಡಿದ್ದಾರೆ.