ಬೆಂಗಳೂರು:ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಸುಳ್ಳು ಪತ್ತೆಹಚ್ಚುವ ಮಂಪರು ಪರೀಕ್ಷೆಗೆ ಅಸಮ್ಮತಿ ಸೂಚಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ಮಂಪರು ಪರೀಕ್ಷೆಗೆ ಅನುಮತಿ ನೀಡಬೇಕೆನ್ನುವ ಸಿಐಡಿ ಮನವಿಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿ ಅಮೃತ್ ಪೌಲ್ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿದ್ದಾರೆ. ಮಂಪರು ಪರೀಕ್ಷೆಗೆ ಅನುಮತಿ ನೀಡಬೇಕೆಂದು ಪ್ರಾಸಿಕ್ಯೂಷನ್ ಮಾಡಿದ ಮನವಿ ಬಗ್ಗೆ ಈಗ ಕೋರ್ಟ್ ತನ್ನ ನಿರ್ಧಾರ ಪ್ರಕಟಿಸಬೇಕಿದೆ.
ಜಾಮೀನಿಗೆ ಸಿಐಡಿ ಆಕ್ಷೇಪ:ಪಿಎಸ್‌ಐ ನೇಮಕಾತಿ ಹಗರಣದಲ್ಲಿ ತಮ್ಮ ಪಾತ್ರದ ಬಗ್ಗೆ ಎಡಿಜಿಪಿ ಪೌಲ್ ಸಿಐಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆದರೆ, ಪ್ರಕರಣದ ಕುರಿತಾಗಿ ಹೇಳಿಕೆ ನೀಡಿದ ಸಿಬ್ಬಂದಿಗೆ ಪೌಲ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ವಿಚಾರ ತನಿಖೆಯ ವೇಳೆ ಗೊತ್ತಾಗಿದೆ ಎಂದು ನ್ಯಾಯಾಲಯಕ್ಕೆ ಸಿಐಡಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಜಾಮೀನಿನ ಮೇಲೆ ಬಿಡುಗಡೆಗೆ ಅಮೃತ್ ಪೌಲ್ ಸಲ್ಲಿಸಿರುವ ಅರ್ಜಿಗೂ ಕೂಡ ಸಿಐಡಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಹಗರಣದಲ್ಲಿ 35ನೇ ಆರೋಪಿಯಾಗಿರುವ ಅಮೃತ್ ಪೌಲ್ ಅವರ ಸಿಬ್ಬಂದಿಯು ಸಿಐಡಿ ಅಧಿಕಾರಿಗಳ ವಿಚಾರಣೆ ಸಂದರ್ಭ ಹೇಳಿಕೆ ನೀಡಿರುವುದಕ್ಕೆ ಅವರಿಗೆ ಪೌಲ್ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅವರಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಆಕ್ಷೇಪಣೆಯಲ್ಲಿ ಸಿಐಡಿ ತಿಳಿಸಿದೆ.
ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಪೌಲ್ ಅವರ ಬಳಿ ಅಭ್ಯರ್ಥಿಗಳ ಓಎಂಆರ್ ಶೀಟ್ಗಳನ್ನು ಇಡಲಾಗಿದ್ದ ಸ್ಟ್ರಾಂಗ್ ರೂಮ್‌ನ ಕೀಗಳು ಇದ್ದವು. ಇತರೆ ಆರೋಪಿಗಳ ಜೊತೆ ಸೇರಿಕೊಂಡು ಪಿತೂರಿ ನಡೆಸಿ ಪೌಲ್ ಅವರು ಉದ್ದೇಶಪೂರ್ವಕವಾಗಿ ಕಿಟ್ ಬಾಕ್ಸ್‌ಗಳ ಕೀಗಳನ್ನು ನೀಡಿದ್ದರು. ಇದನ್ನು ಬಳಸಿಕೊಂಡು ಇತರೆ ಆರೋಪಿಗಳು ಅಭ್ಯರ್ಥಿಗಳ ಓಎಂಆರ್ ಶೀಟ್ಗಳನ್ನು ತಿರುಚಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ದಾಖಲೆಗಳನ್ನು ಆಧರಿಸಿ ಪೊಲೀಸರು ಹಾಲಿ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 409 ಅನ್ನು ಸೇರಿಸಿದ್ದಾರೆ. ಇದರಲ್ಲಿ ಪೌಲ್ ಅವರ ಪಾತ್ರ ಸ್ಪಷ್ಟವಾಗಿದ್ದು, ಅವರಿಗೆ ಜಾಮೀನು ನಿರಾಕರಿಸಬೇಕು. ಗಂಭೀರ ಅಪರಾಧದಲ್ಲಿ ಭಾಗಿಯಾಗಿರುವ ಅವರಿಗೆ ಜಾಮೀನು ನೀಡಿದರೆ, ಸಾಕ್ಷಿಯನ್ನು ತಿರುಚುವ ಸಾಧ್ಯತೆ ಇರುತ್ತದೆ ಎಂದು ಆಕ್ಷೇಪಣೆಯಲ್ಲಿ ಸಿಐಡಿ ಉಲ್ಲೇಖಿಸಿದೆ.
ಪೌಲ್ ಅವರ ಮೊಬೈಲ್ ಫೋನ್ ಜಪ್ತಿ ಮಾಡಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅದರ ವರದಿ ಇನ್ನಷ್ಟೇ ಬರಬೇಕಿದೆ. ಜೊತೆಗೆ ಸಿಐಡಿಯು ಸಾಕ್ಷಿಗಳ ಹೇಳಿಕೆ ದಾಖಲಿಸುತ್ತಿದೆ. ಈ ಸಂದರ್ಭದಲ್ಲಿ ಪೌಲ್ ಅವರಿಗೆ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಬಹುದು. ಪ್ರಕರಣದಲ್ಲಿ 7, 9, 17, 18, 36 ಮತ್ತು 37ನೇ ಆರೋಪಿಗಳು ನಾಪತ್ತೆಯಾಗಿದ್ದು, ಅವರನ್ನು ಬಂಧಿಸಿ, ಪೌಲ್ ಅವರ ಜೊತೆಗಿನ ಅವರ ಪಿತೂರಿ ಪಾತ್ರವನ್ನು ಪತ್ತೆ ಹಚ್ಚಬೇಕಿದೆ. ಹೀಗಾಗಿ ಯಾವುದೇ ದೃಷ್ಟಿಯಿಂದ ನೋಡಿದರೂ ಪೌಲ್ ಅವರು ಜಾಮೀನಿಗೆ ಅರ್ಹರಲ್ಲ, ಜಾಮೀನು ನೀಡಬಾರದು ಎಂದು ಸಿಐಡಿ ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಪಿಎಸ್ಐ ಅಕ್ರಮದಲ್ಲಿ ಗಣ್ಯರ ಕೊರಳಿಗೆ ಉರುಳು?: ಅಮೃತ್ ಪೌಲ್ ಅಕ್ರಮ ಆಸ್ತಿ ಬಗ್ಗೆ ಸಿಐಡಿ ಶೋಧ