ಬೆಂಗಳೂರು:40ರಷ್ಟು ಕಮಿಷನ್ ಬಿಜೆಪಿಯ ಸರ್ಕಾರದ ಪಿಎಸ್ಐ ನೇಮಕಾತಿ ಹಗರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಇದರಿಂದ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದೆ. ಸರ್ಕಾರ 545 ಹಾಗೂ 402 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿತ್ತು.
ಇನ್ನು 402 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ದೈಹಿಕ ಪರೀಕ್ಷೆ ನಡೆಸಲಾಗಿದೆ. ಈಗ ಅದನ್ನು ಮುಂದುವರಿಸಲು ಆದೇಶ ನೀಡಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 545 ಹುದ್ದೆ ನೇಮಕಾತಿ ಹಗರಣದ ಸಮಗ್ರ ತನಿಖೆ ಮುಗಿಯುವವರೆಗೂ ಯಾವುದೇ ನೇಮಕಾತಿ ಪ್ರಕ್ರಿಯೆ ಮಾಡುವುದಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕರು ಹೇಳಿದ್ದರು. ಇದನ್ನು ಗೃಹ ಸಚಿವರೂ ಸಮರ್ಥಿಸಿಕೊಂಡಿದ್ದರು. ಅಕ್ರಮ ನಡೆದಿದ್ದ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ನಡೆಸಲಾಗುವುದು ಎಂದು ಹೇಳಿದ್ದರು.
ಆ ಪರೀಕ್ಷೆ ವರದಿ ಬಂದಿದೆಯೋ ಇಲ್ಲವೋ? ಬಂದಿದ್ದರೆ, ಅದು ಎಲ್ಲಿದೆ? ಈಗ ಸರ್ಕಾರ ತನ್ನ ಹೇಳಿಕೆಗೆ ವಿರುದ್ಧವಾಗಿ ಯಾಕೆ ನಡೆದುಕೊಳ್ಳುತ್ತಿದೆ? ಇಲ್ಲಿ ಗೊಂದಲ ಸೃಷ್ಟಿಸಿರುವುದು ಡಿಜಿ ಹಾಗೂ ಗೃಹಸಚಿವರು. ನೊಂದ ಅಭ್ಯರ್ಥಿಗಳು ಗೃಹ ಸಚಿವರನ್ನು ಭೇಟಿಯಾದಾಗ, ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ. ನೇಮಕಾತಿ ಪ್ರಕ್ರಿಯೆ ಮಾಡುವುದಿಲ್ಲ ಎಂದು ಹೇಳಿದರು.
ಇನ್ನು ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿ ಹೋದಾಗ, ನಮ್ಮ ಬಳಿ ಹೊಸ ತಂತ್ರಜ್ಞಾನ ಇದೆ. ನೀವು ಪ್ರಾಮಾಣಿಕ ಪರೀಕ್ಷೆ ಬರೆದಿದ್ದರೆ ತಂತ್ರಜ್ಞಾನ ಬಳಸಿಕೊಂಡು ನಿಮಗೆ ನ್ಯಾಯ ಒದಗಿಸುತ್ತೇವೆ ಎಂದು ಭರವಸೆ ನೀಡಿ ಅಭ್ಯರ್ಥಿಗಳಲ್ಲಿ ಆಸೆ ಮೂಡಿಸಿದರು. ಈಗ ಸರ್ಕಾರ ಯಾರ ಮಾತು ಉಳಿಸಿಕೊಂಡಿದೆ? ಅವರ ಮಾತಿಗೆ ಅವರೇ ಬೆಲೆ ನೀಡುವುದಿಲ್ಲವೇ? ಅಥವಾ ಮೈಗೆ ಎಣ್ಣೆ ಹಚ್ಚಿಕೊಂಡು ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರಾ?
ಈಗ ಸಾಮಾಜಿಕ ಜಾಲತಾಣಗಳಲ್ಲಿ 2 ಆಡಿಯೋಗಳು ಹರಿದಾಡುತ್ತಿವೆ. ಅಭ್ಯರ್ಥಿಯೊಬ್ಬರು ಗೃಹಸಚಿವರ ಜತೆ ಮಾತನಾಡುತ್ತಿದ್ದಾರೆ. ಈ ಆಡಿಯೋ ಹಿನ್ನೆಲೆ ನಾವು ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ 10 ಪ್ರಶ್ನೆಗಳನ್ನು ಕೇಳ ಬಯಸುತ್ತೇವೆ. ಈ ಆಡಿಯೋ ವಿಚಾರಕ್ಕೂ ನಮಗೆ ನೋಟಿಸ್ ನೀಡುತ್ತಾರೋ ಏನೋ? ಎಂದು ಪ್ರಶ್ನಿಸಿದ್ದಾರೆ.
402 ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿದ್ದು, ಅದಕ್ಕೆ ಸಂಬಂಧಿಸಿದಂತೆ ನಾವು ಸಿಐಡಿಗೆ ಸಾಕ್ಷಿ ಪುರಾವೆ ಸಲ್ಲಿಸಿದ್ದೇವೆ ಎಂದು ಅಭ್ಯರ್ಥಿ ಗೃಹಸಚಿವರಿಗೆ ಹೇಳಿದ್ದಾರೆ. ಆದರೂ ತನಿಖೆಗೂ ಮುನ್ನ ಮತ್ತೆ ನೇಮಕಾತಿ ಪ್ರಕ್ರಿಯೆ ಮುಂದುವರಿಯುತ್ತಿರುವುದೇಕೆ? ನೀವು ಕೇವಲ ಉತ್ತರ ಪರೀಕ್ಷೆ ವಿಚಾರವಾಗಿ ತನಿಖೆ ಮಾಡುತ್ತಿದ್ದೀರಿ. ಆದರೆ ದೈಹಿಕ ಪರೀಕ್ಷೆಯಲ್ಲೂ ಅಕ್ರಮವಾಗಿದೆ. ಪ್ರಶ್ನೆ ಪತ್ರಿಕೆ 1ರಲ್ಲೂ ಅಕ್ರಮ ನಡೆದಿದ್ದು, ಅದಕ್ಕೂ ನಾವು ಸಾಕ್ಷಿ ನೀಡಿದ್ದು- ಹೇಳಿದ್ದು, ಸರ್ಕಾರ ಈ ಬಗ್ಗೆ ತನಿಖೆ ಯಾಕೆ ಮಾಡುತ್ತಿಲ್ಲ? ಎಂಬುದು ಸೇರಿದಂತೆ 10 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಪಿಎಸ್ ಐ ಹಗರಣ, 431 ಕೋಟಿಯ ಬೋರ್ ವೆಲ್ ಹಗರಣ, ಬೋವಿ ನಿಗಮ ಮಂಡಳಿ ಹಗರಣ, ಸಹಾಯಕ ಪ್ರಾಧ್ಯಾಪಕ ಹಗರಣದ ಬಗ್ಗೆ ಬಿಜೆಪಿ ಒಬ್ಬ ಶಾಸಕ ಮಾತನಾಡಲಿ. ಮೊನ್ನೆ ಬಹಿರಂಗ ಹೇಳಿಕೆಯಲ್ಲಿ ಪ್ರತಾಪ್ ಸಿಂಹ ಏನು ಹೇಳಿದರು? ಶಿಕ್ಷಣ ಸಚಿವರ ಮುಂದೆಯೇ ಕುಲಪತಿಗಳ ಸ್ಥಾನಕ್ಕೆ 5-6 ಕೋಟಿ ನೀಡಬೇಕು ಎಂದು ಹೇಳುತ್ತಾರೆ ಎಂದು ಆಕ್ಷೇಪಿಸಿದರು.
ಇದನ್ನೂಓದಿ:ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು... ಮುಂದುವರಿದ ಶೋಧ ಕಾರ್ಯ