ಬೆಂಗಳೂರು:ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಕ್ರಮ ನೇಮಕಾತಿ ಹಗರಣ ಸಂಬಂಧ ಬಳಸಲಾದ ಬ್ಲೂಟೂತ್, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು, ತಿದ್ದುಪಡಿ ಮಾಡಲಾದ ಒಎಂಆರ್ ಶೀಟ್ಗಳ ಪ್ರತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸಿಐಡಿಗೆ ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರು ಗುರುವಾರ ಪಿಎಸ್ಐ ನೇಮಕ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರೋಪಿ ಸಿ.ಎನ್. ಶಶಿಧರ್ ಮತ್ತು ಇತರರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಿದರು. ಜಾಮೀನು ಅರ್ಜಿ ವಿಚಾರಣೆ ಆರಂಭದಲ್ಲಿ ಸಿಐಡಿ ಪರ ವಕೀಲರು ನ್ಯಾಯಾಲಯಕ್ಕೆ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅವರ ಬಂಧನ ಸೇರಿದಂತೆ ತನಿಖೆಯ ಪ್ರಗತಿ ಬಗೆಗಿನ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು.
ಪಿಎಸ್ಐ ನೇಮಕಾತಿ ಹಗರಣ: ಬ್ಲೂಟೂತ್, FSL ವರದಿ ಸಲ್ಲಿಸಲು ಸಿಐಡಿಗೆ ಹೈಕೋರ್ಟ್ ಆದೇಶ
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಐಡಿ ಪರ ವಕೀಲರು, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅವರ ಬಂಧನ ಸೇರಿದಂತೆ ತನಿಖೆಯ ಪ್ರಗತಿ ಬಗೆಗಿನ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಿದರು.
ಸಿಐಡಿ ಸಲ್ಲಿಸಿದ ವರದಿ ದಾಖಲಿಸಿಕೊಂಡ ನ್ಯಾಯಾಲಯ, ಬ್ಲೂಟೂತ್ ಸೇರಿದಂತೆ ಪ್ರಕರಣದಲ್ಲಿ ಯಾವ್ಯಾವ ಅಕ್ರಮ ವಿಧಾನಗಳನ್ನು ಆರೋಪಿಗಳು ಬಳಸಿದ್ದಾರೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ತನಿಖಾ ಪ್ರಗತಿಯ ವರದಿಯಲ್ಲಿ ಸಲ್ಲಿಸಲು ತಿಳಿಸಿ ಅರ್ಜಿ ವಿಚಾರಣೆಯನ್ನು ಜುಲೈ ತಿಂಗಳ 14ಕ್ಕೆ ಮುಂದೂಡಿದೆ. ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ನಿಜವಾದ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸುವುದು ಕೋರ್ಟ್ ಉದ್ದೇಶವಾಗಿದೆ. ಅದಕ್ಕಾಗಿ ನ್ಯಾಯಾಲಯ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು ಎಂದು ನ್ಯಾಯಾಲಯವು ವಿಚಾರಣೆ ವೇಳೆ ತಿಳಿಸಿತು.
ಇದನ್ನೂ ಓದಿ:ಅಕ್ರಮ ಗಣಿಗಾರಿಕೆ: ಸೀಮಂತ್ ಕುಮಾರ್ ಸಿಂಗ್ ವಿರುದ್ಧದ ಸಿಬಿಐ ತನಿಖಾ ವರದಿ ಕೇಳಿದ ಹೈಕೋರ್ಟ್