ಬೆಂಗಳೂರು:ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಪಿಎಸ್ಐ ಪರೀಕ್ಷಾ ಅಕ್ರಮ ನೇಮಕಾತಿ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಅಪರಾಧ ತನಿಖಾ ಇಲಾಖೆ(ಸಿಐಡಿ) ಪೊಲೀಸರು ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪಿಎಸ್ಐ ಆಕ್ಷಾಂಕಿ ಕುಶಾಲ್ ಕುಮಾರ್, ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಸೇರಿದಂತೆ ಒಟ್ಟು 8 ಮಂದಿ ಆರೋಪಿಗಳ ವಿರುದ್ಧ 1300ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
1300 ಪುಟಗಳ ಚಾರ್ಜ್ ಶೀಟ್:ಪಿಎಸ್ಐ ಅಕ್ರಮ ಹಿನ್ನೆಲೆ ನಗರದ 5 ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಸಿಐಡಿ ಸದ್ಯ ಹಲಸೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿಯಾಗಿರುವ ಪಿಎಸ್ಐ ಅಭ್ಯರ್ಥಿ ಕುಶಾಲ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. 1300 ಪುಟಗಳ ಚಾರ್ಜ್ ಶೀಟ್ನಲ್ಲಿ 8 ಮಂದಿ ಆರೋಪಿಗಳ ಹೆಸರು ಉಲ್ಲೇಖಿಸಿದೆ. 37 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ಪ್ರಕರಣದ ಮೊದಲ ಆರೋಪಿ ಕುಶಾಲ್ ಕುಮಾರ್, ಮದ್ಯವರ್ತಿ ದರ್ಶನ್ ಗೌಡ, ಮೈಸೂರಿನ ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ (ಆರ್ಪಿಐ) ಮಧು, ನೇಮಕಾತಿ ವಿಭಾಗದ ಸಿಬ್ಬಂದಿ ಹರ್ಷ, ಶ್ರೀಧರ್, ಶ್ರೀನಿವಾಸ್, ಡಿವೈಎಸ್ಪಿ ಶಾಂತಕುಮಾರ್ ಹಾಗೂ 8ನೇ ಆರೋಪಿಯಾಗಿ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಇದನ್ನೂ ಓದಿ:ಪಿಎಸ್ಐ ನೇಮಕಾತಿ ಹಗರಣ.. ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ
ಪಿಎಸ್ಐ ಅಭ್ಯರ್ಥಿ ಕುಶಾಲ್ ವಿರುದ್ಧ ಚಾರ್ಜ್ ಶೀಟ್:ಹೈಗ್ರೌಂಡ್ಸ್ ಠಾಣೆಯಲ್ಲಿ ಸುಮಾರು 3065 ಪುಟಗಳ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು. ನಂತರ ಹೆಚ್ಚುವರಿಯಾಗಿ 1406 ಪುಟಗಳ ಚಾರ್ಜ್ ಶೀಟ್ನಲ್ಲಿ ಎಡಿಜಿಪಿ ಅವರ ಪಾತ್ರದ ಬಗ್ಗೆ ಉಲ್ಲೇಖಿಸಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲಾಗಿತ್ತು. ಪೂರ್ಣ ಪ್ರಮಾಣದ ಚಾರ್ಜ್ ಶೀಟ್ ಅನ್ನು ಸಿಐಡಿ ಇನ್ನಷ್ಟೇ ಸಲ್ಲಿಸಬೇಕಿದೆ.
ನಂತರ ಕಲಾಸಿಪಾಳ್ಯ ಠಾಣೆ ಹೆಡ್ ಕಾನ್ಸ್ಟೇಬಲ್ ಹರೀಶ್ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿಯೂ ಕಳೆದ ವರ್ಷವೇ ಚಾರ್ಜ್ ಶೀಟ್ ಸಲ್ಲಿಸಿದ್ದ ಸಿಐಡಿ ಇದೀಗ ಹಲಸೂರು ಠಾಣೆಯಲ್ಲಿ ಪಿಎಸ್ಐ ಅಭ್ಯರ್ಥಿ ಕುಶಾಲ್ ವಿರುದ್ಧ ದಾಖಲಾಗಿದ್ದ ಪ್ರಕರಣ ಸಂಬಂಧ ದೋಷಾರೋಪಪಟ್ಟಿ ಸಲ್ಲಿಸಿದಂತಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಯಲಹಂಕ ನ್ಯೂಟೌನ್ ಹಾಗೂ ಕೋರಮಂಗಲದಲ್ಲಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪಿಎಸ್ಐ ಅಭ್ಯರ್ಥಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ತನಿಖಾಧಿಕಾರಿಗಳು ಅಂತಿಮ ಹಂತದ ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.