ಕರ್ನಾಟಕ

karnataka

ETV Bharat / state

PSI: ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣ: ಸರ್ಕಾರ ಮರುಪರೀಕ್ಷೆ ನಡೆಸಬಹುದು- ಹೈಕೋರ್ಟ್ - ಅಡ್ವೋಕೇಟ್ ಜನರಲ್

PSI Scam: ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಸರ್ಕಾರ ಮರು ಪರೀಕ್ಷೆ ನಡೆಸಬಹುದು ಎಂದು ಹೈಕೋರ್ಟ್​ ಮೌಖಿಕವಾಗಿ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್

By

Published : Aug 4, 2023, 7:08 PM IST

ಬೆಂಗಳೂರು :ಪೊಲೀಸ್​ ಸಬ್​ಇನ್​ಸ್ಪೆಕ್ಟರ್​ (ಪಿಎಸ್‌ಐ) ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಸರ್ಕಾರ ಮರುಪರೀಕ್ಷೆೆ ನಡೆಸಬಹುದು ಎಂದು ಹೈಕೋರ್ಟ್ ಮೌಖಿಕವಾಗಿ ತಿಳಿಸಿದೆ. ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆಗೆ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಹೈಕೋರ್ಟ್​ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹಾಗೂ ನ್ಯಾ.ಟಿ.ಜಿ ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ, ಪರೀಕ್ಷೆ ನಡೆಸುವ ಸಂಬಂಧ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಪ್ರಕರಣದಲ್ಲಿ ಹಿರಿಯ ವಕೀಲರು ವಾದ ಮಂಡಿಸಬೇಕಿದ್ದು, ಸ್ವಲ್ಪ ಸಮಯ ಅರ್ಜಿಯ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು. ಸ್ವಲ್ಪ ಹೊತ್ತಿನವರೆಗೆ ಆಗಲ್ಲ, ಬೇಕಿದ್ದರೆ ಸೋಮವಾರ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠ ತಿಳಿಸಿತು.

ಇದನ್ನೂ ಓದಿ:PSI scam : ಆರೋಪ ರಹಿತರ ನೇಮಕ ಕುರಿತು ಮಾಹಿತಿ ನೀಡಲು ಜುಲೈ 5ರ ವರೆಗೆ ಕಾಲಾವಕಾಶ ನೀಡಿದ ಹೈಕೋರ್ಟ್​

ಅಲ್ಲದೆ, ಸರ್ಕಾರ ಮರು ಪರೀಕ್ಷೆೆ ನಡೆಸಿದರೆ ಸಮಸ್ಯೆ ಏನು?. ನೀವು (ಅರ್ಜಿದಾರರು) ಪರೀಕ್ಷೆೆ ಬರೆದು ಪಾಸ್ ಆಗಬಹುದಲ್ಲವೇ?. ಅದೇ ರೀತಿ ಬೇರೆಯವರೂ ಪರೀಕ್ಷೆೆ ಬರೆಯಲಿ. ಸರ್ಕಾರ ಮರು ಪರೀಕ್ಷೆೆ ನಡೆಸಬಹುದು ಎಂಬುದು ನಮ್ಮ ಅಭಿಪ್ರಾಯ ಎಂದು ಮೌಖಿಕವಾಗಿ ಹೇಳಿದ ನ್ಯಾಯಪೀಠ, ಸೋಮವಾರ ವಿಚಾರಣೆ ನಡೆಸೋಣ. ಆದರೆ, ಮೇಲ್ನೋಟಕ್ಕೆ (ಪ್ರೈಮಾ ಫೇಸಿ) ನಾವು ನಿಮ್ಮ ಜೊತೆಗೆ ಇಲ್ಲ ಎಂದು ನ್ಯಾಯಪೀಠ ಅರ್ಜಿದಾರರ ಪರ ವಕೀಲರಿಗೆ ತಿಳಿಸಿತು.

ಈ ವೇಳೆಗೆ ರಾಜ್ಯ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಕೋರ್ಟ್ ಹಾಲ್ ಪ್ರವೇಶಿಸಿದರು. ಆಗ ಅಡ್ವೋಕೇಟ್ ಜನರಲ್ ಅವರನ್ನುದ್ದೇಶಿಸಿ, ಸರ್ಕಾರ ಮರು ಪರೀಕ್ಷೆೆ ನಡೆಸಬಹುದು ಎಂಬುದು ನಮ್ಮ ಅಭಿಪ್ರಾಯ. ಸರ್ಕಾರದ ಪ್ರಕ್ರಿಯೆಯಲ್ಲಿ ಅಡ್ಡಿ ಉಂಟು ಮಾಡುವುದೇಕೆ? ಎಂದು ಅರ್ಜಿದಾರರ ಪರ ವಕೀಲರಿಗೆ ಹೇಳಿದ್ದೇವೆ ಎಂದು ನ್ಯಾಯಪೀಠ ಅಡ್ವೋಕೇಟ್ ಜನರಲ್ ಅವರ ಗಮನಕ್ಕೆ ತಂದಿತು.

ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಲು ಅಡ್ವೋಕೇಟ್ ಜನರಲ್ ಮುಂದಾದರು. ಆಗ ಅರ್ಜಿದಾರರ ಪರ ಕಿರಿಯ ವಕೀಲರು ಬಂದಿದ್ದಾರೆ, ಅವರಿಗೆ ಅಷ್ಟೊಂದು ಮಾಹಿತಿ ಇಲ್ಲ ಎನಿಸುತ್ತದೆ. ಹಿರಿಯ ವಕೀಲರು ಬರಬೇಕಂತೆ. ಹಾಗಾಗಿ, ಸೋಮವಾರ ಬೆಳಿಗ್ಗೆೆ 10.30ಕ್ಕೆ ಪ್ರಕರಣದ ವಿಚಾರಣೆ ನಡೆಸೋಣ ಎಂದು ನ್ಯಾಯಪೀಠ ಹೇಳಿತು. ಇದಕ್ಕೆ ಅಡ್ವೋಕೇಟ್ ಜನರಲ್ ಸಮ್ಮತಿ ಸೂಚಿಸಿದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಿತು.

ಇದನ್ನೂ ಓದಿ:ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಏಕ ಸದಸ್ಯ ತನಿಖಾ ಆಯೋಗ ನೇಮಿಸಿ ಸರ್ಕಾರ ಆದೇಶ

ABOUT THE AUTHOR

...view details