ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿದ್ದ ಆದೇಶ ರದ್ದು ಕೋರಿ ಆಯ್ಕೆಯಾಗಿದ್ದ ಹಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಆ.16ಕ್ಕೆ ಮುಂದೂಡಿದೆ.
ಎನ್.ವಿ. ಚಂದನ್ ಸೇರಿದಂತೆ ಆಯ್ಕೆಪಟ್ಟಿಯಲ್ಲಿದ್ದ 100 ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಗಳು ನ್ಯಾಯಮೂರ್ತಿಗಳಾದ ಪಿ.ಎಸ್. ದಿನೇಶ್ ಕುಮಾರ್ ಹಾಗೂ ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ವಾದ ಮಂಡನೆಗೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಮತ್ತೊಂದೆಡೆ ರಾಜ್ಯ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು ಅರ್ಜಿಯನ್ನು ಆ.16 ರಂದು ವಿಚಾರಣೆಗೆ ನಿಗದಿಪಡಿಸಬಹುದು ಎಂದು ತಿಳಿಸಿದರು. ಆ ಮನವಿಗೆ ಒಪ್ಪಿದ ನ್ಯಾಯಪೀಠ ವಿಚಾರಣೆಯನ್ನು ಆ.16ಕ್ಕೆ ಮುಂದೂಡಿತಲ್ಲದೇ, ಅಂದು ಅರ್ಜಿಗೆ ಸಂಬಂಧಿಸಿದ ಎಲ್ಲ ಪಕ್ಷಗಾರರು ವಾದ ಮಂಡನೆಗೆ ಸಿದ್ಧವಾಗಿರಬೇಕು ಎಂದು ಮೌಖಿಕವಾಗಿ ಸೂಚಿಸಿತು.
ಪ್ರಕರಣದ ಹಿನ್ನೆಲೆ:ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ಪಿಎಸ್ಐ ನೇಮಕಾತಿಗೆ ನಡೆಸಲಾಗಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿದ್ದ ಸರ್ಕಾರ, ಮರುಪರೀಕ್ಷೆ ನಡೆಸುವುದಾಗಿ 2022ರ ಏ.29ರಂದು ಹಿಂದಿನ ಬಿಜೆಪಿ ಸರ್ಕಾರ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಅದನ್ನು 2022ರ ಜು.19 ರಂದು ಕೆಎಟಿ ವಜಾಗೊಳಿಸಿತ್ತು. ಇದರಿಂದ ಅಭ್ಯರ್ಥಿಗಳು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಹೊಸದಾಗಿ ಲಿಖಿತ ಪರಿಕ್ಷೆ ನಡೆಸುವ ಸರ್ಕಾರದ ಆದೇಶಕ್ಕೆ 2022ರ ಸೆ.28 ರಂದು ಮಧ್ಯಂತರ ತಡೆಯಾಜ್ಞೆ ನೀಡಿತ್ತು.