ಬೆಂಗಳೂರು: ಸರ್ಕಾರಿ ಕೆಲಸಕ್ಕಾಗಿ ಅದೆಷ್ಟೋ ಮಂದಿ ಕನಸು ಕಟ್ಟಿಕೊಂಡು ತಮ್ಮದೇ ಆದಂತಹ ರೀತಿಯಲ್ಲಿ ಪರೀಕ್ಷೆಗೆ ವರ್ಷಾನುಗಟ್ಟಲೇ ಸಿದ್ಧತೆ ಮಾಡಿಕೊಳ್ಳುತ್ತಾರೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ಸಿದ್ಧರಾಗಬೇಕು? ಹೇಗೆ ಎದುರಿಸಬೇಕು? ಯಾವ ರೀತಿಯ ಪ್ರಶ್ನೆಗಳು ಬರಲಿವೆ? ಎಂಬುದರ ಸೂಕ್ತ ತರಬೇತಿ ಇಲ್ಲದೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ನಿರಾಸೆ ಅನುಭವಿಸುತ್ತಾರೆ. ಇಂತಹ ಬಡ ಆಸಕ್ತ ಆಭ್ಯರ್ಥಿಗಳಿಗಾಗಿ ಸಬ್ಇನ್ಸ್ಪೆಕ್ಟರ್ರೊಬ್ಬರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ.
ಹೌದು, ಹೈಕೋರ್ಟ್ನ ಭದ್ರತಾ ವಿಭಾಗದ ಸಬ್ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಟಿಪ್ಪು ಸುಲ್ತಾನ್ ನಾಯ್ಕವಾಡಿ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಭ್ಯರ್ಥಿಗಳಿಗೆ ಸೂಕ್ತ ತರಬೇತಿ ನೀಡಿ ಪರೀಕ್ಷೆಗೆ ಅಣಿಗೊಳಿಸುವ ಮೂಲಕ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ನಗರದಲ್ಲಿ ಹಲವು ಕೋಚಿಂಗ್ ಸೆಂಟರ್ಗಳಿವೆ. ಇಲ್ಲಿಂದ ತರಬೇತಿ ಪಡೆದವರು ಸರ್ಕಾರಿ ಕೆಲಸಗಳಿಗೆ ನೇಮಕ ಸಹ ಆಗಿದ್ದಾರೆ. ಆದರೆ, ಬಡ ಅಭ್ಯರ್ಥಿಗಳಿಗೆ ಕೋಚಿಂಗ್ ಸೆಂಟರ್ಗಳಿಗೆ ಹಣ ನೀಡಲು ಸಾಧ್ಯವಾಗದೆ ಎಷ್ಟೋ ಮಂದಿ ತಮ್ಮ ಆಸೆಯನ್ನು ನುಚ್ಚು ನೂರಾಗಿಸಿಕೊಂಡಿದ್ದಾರೆ.
ಇಂತಹ ಆಸಕ್ತ ಬಡ ಆಭ್ಯರ್ಥಿಗಳಿಗಾಗಿ ಸಂಜೆ ವೇಳೆ ಹತ್ತಾರು ಆಭ್ಯರ್ಥಿಗಳಿಗಾಗಿ ಕಳೆದ ಒಂದು ವರ್ಷದಿಂದ ಪಿಎಸ್ಐ ಪರೀಕ್ಷಾ ತರಬೇತಿ ನೀಡುತ್ತಿದ್ದಾರೆ ಟಿಪ್ಪು ಸುಲ್ತಾನ್. ಖುಷಿಯ ಸಂಗತಿಯೆಂದರೆ ತಮ್ಮ ಜೊತೆ ಸಹದೋಗ್ಯಿಗಳಾಗಿ ಕೆಲಸ ಮಾಡುತ್ತಿದ್ದ ಐವರು ಸಿಬ್ಬಂದಿ ಪಿಎಸ್ಐಗಳಾಗಿ ನೇಮಕವಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಭ್ಯರ್ಥಿಗಳನ್ನು ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವ ಗುರಿ ಪಿಎಸ್ಐ ಅವರದ್ದಾಗಿದೆ.
ಈ ಹಿಂದೆ ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಪಿಎಸ್ಐ ಟಿಪ್ಪು ಸುಲ್ತಾನ್, ಸುಮಾರು 20 ರಿಂದ 25 ಪೊಲೀಸ್ ಆಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತಿದ್ದರು. ಅಲ್ಲಿಂದ ವರ್ಗಾವಣೆಯಾದ ಬಳಿಕ ಕೊರೊನಾ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ಟ್ರೈನಿಂಗ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.